ಸಕಲೇಶಪುರ ಸುತ್ತಮುತ್ತ ಕಾಡಾನೆ ದಾಳಿ: ಗದ್ದೆಗಳ ನಾಶ
ಸಕಲೇಶಪುರ: ಮಲೆನಾಡಿನಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದ್ದು, ಈ ದಾಳಿಗೆ ರೈತರು ತತ್ತರಿಸಿ ಹೋಗಿದ್ದಾರೆ. ಹಿಂಡಾನೆಗಳು ಹಗಲು ಇರುಳೆನ್ನದೆ ಜಮೀನು ಮತ್ತು ಕಾಫಿ ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ.ಇತ್ತೀಚೆಗೆ ತಾಲೂಕಿನ ಭೂಮರಹಳ್ಳಿ ಸಮೀಪ ಕಾಡಾನೆ ಹಿಂಡಿನ ದಾಳಿಗೆ ಸಿಲುಕಿ ನೂರಾರು ಎಕರೆ ಬತ್ತದ ಗದ್ದೆ ನಾಶವಾಗಿದೆ. ಕಳೆದ ಎರಡು ದಿನಗಳಿಂದ ಗ್ರಾಮ ಸಮೀಪದ ಅರಣ್ಯದಲ್ಲಿ ಬೀಡುಬಿಟ್ಟಿರುವ ಸುಮಾರು 15 ಕಾಡಾನೆಗಳ ಹಿಂಡು ರಾತ್ರಿ ವೇಳೆ ಬೆಳೆದು ನಿಂತಿರುವ ಬತ್ತದ ಗದ್ದೆಗಳನ್ನು ತಿಂದು, ತುಳಿದು ಹಾಳು ಮಾಡುತ್ತಿರುವುದರಿಂದ ಲಕ್ಷಾಂತರ ರು. ಹಾನಿಯಾಗಿದೆ. ಕಾಡಾನೆ ಹಿಂಡಿನಲ್ಲಿ ಎರಡು ಮರಿಗಳಿದ್ದು, ಭತ್ತದ ಗದ್ದೆಗಳಲ್ಲೆ ಆನೆಗಳು ಚಿನ್ನಾಟವಾಡಿರುವ ಕಾರಣ ಬತ್ತದ ಗದ್ದೆಯ ಬದುಗಳು ಕುಸಿದಿವೆ. ಆಕ್ರೋಶ ಕಾಡಾನೆ ಹಾವಳಿ ಪೀಡಿತ ಗ್ರಾಮಕ್ಕೆ ಭೇಟಿ ನೀಡಿದ ಯಸಳೂರು ವಲಯ ಅರಣ್ಯ ರಕ್ಷಕ ಶಿವರಾಂ ಹಾಗೂ ನಾಗೇಶ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ನಮ್ಮ ಗ್ರಾಮ ನಿರಂತರವಾಗಿ ಕಾಡಾನೆಗಳ ಹಾವಳಿಗೆ ತುತ್ತಾಗುತ್ತಿದ್ದರೂ, ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದೆ.ಕಾಡಾನೆ ಹಾವಳಿಯಿಂದ ಬೆಳೆ ಕಳೆದುಕೊಂಡವರು ಪರಿಹಾರಕ್ಕಾಗಿ ಕಳೆದ ಮೂರು ವರ್ಷಗಳಿಂದ ಅರ್ಜಿ ಸಲ್ಲಿಸಿ, ಮನವಿ ಮಾಡಿದ್ದರೂ ಇದುವರಗೆ ಅರಣ್ಯ ಇಲಾಖೆಯಿಂದ ಯಾವುದೇ ಪರಿಹಾರ ನೀಡುತ್ತಿಲಎಂದು ಆಕ್ರೋಶ ವ್ಯಕ್ತಪಡಿಸಿದರು.