ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಕ್ರಮ ಸಾಬೀತಾದಲ್ಲಿ ರಾಜಕೀಯ ನಿವೃತ್ತಿ

Rashmi Kasaragodu
Updated On : 4 Oct 2013, 12:48 pm

ಕನ್ನಡಪ್ರಭ ವಾರ್ತೆ೤ ಹಾಸನ೤ ಅ.3
ತಮ್ಮ ವಿರುದ್ಧ ಹಾಗೂ ಜೆಡಿಎಸ್ ಮುಖಂಡರ ಮೇಲೆ ಕಾಂಗ್ರೆಸ್ ಮುಖಂಡರು ಆಧಾರ ರಹಿತ ಆರೋಪ ಮಾಡುತ್ತಿದ್ದು, ಒಂದು ವೇಳೆ ಅಕ್ರಮ ವ್ಯವಹಾರ ನಡೆಸಿರುವುದನ್ನು ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಶಾಸಕ ಎಚ್.ಎಸ್. ಪ್ರಕಾಶ್ ಸವಾಲು ಹಾಕಿದ್ದಾರೆ.
ಅಕ್ರಮ ನಡೆಸಿ ಜೀವನ ನಿರ್ವಹಣೆ ಮಾಡುವ ದುಸ್ಥಿತಿ ತಮಗೆ ಬಂದಿಲ್ಲ. ಹಾಗೆ ಮಾಡಿದ್ದರೆ ಜನತೆ ನನ್ನನ್ನು ಆಯ್ಕೆ ಮಾಡುತ್ತಿರಲಿಲ್ಲ. ಅಕ್ರಮ ಮರಳು, ಗಣಿಗಾರಿಕೆ ಮತ್ತು ಮರ ಸಾಗಾಣಿಕೆ ಮಾಡುವ ಜಾಯಮಾನ ತಮ್ಮದಲ್ಲ.  ಇದನ್ನು ಅರಿಯಬೇಕು ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಗುರುವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸೇರಿದ ಎಚ್.ಕೆ. ಜವರೇಗೌಡರು ಮತ್ತು ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಅವರು, ಜೆಡಿಎಸ್ನಲ್ಲಿದ್ದಾಗ ಪತ್ರಗಳ ಮೂಲಕ ಭಯಾನಕ ರೀತಿಯಲ್ಲಿ ಆರೋಪ ಪ್ರತ್ಯಾರೋಪ ಮಾಡಿಕೊಂಡರು. ಹೀಗೆ ಪ್ರೇಮ ಪತ್ರ ಬರೆದುಕೊಂಡಿದ್ದು ಕಪಟ ನಾಟಕ ಎಂಬುದು ಈಗ ಜನರಿಗೆ ಅರ್ಥವಾಗಿದೆ. ಈ ಇಬ್ಬರು ಮುಖಂಡರು ಸೇರಿಕೊಂಡು ಅಕ್ರಮ ಮರಳು ಮತ್ತು ಮರ ಸಾಗಾಣಿಕೆ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದರು. ಅಧಿಕಾರಿಯಾಗಿ ಸರಿಯಾಗಿ ಕೆಲಸ ನಿರ್ವಹಿಸದ ತಹಸೀಲ್ದಾರ್ ಮಮಂಜುನಾಥ್ ಕ್ಷುಲ್ಲಕ ರಾಜಕಾರಣ ಮಾಡಿ, ಶಾಸಕರ ಹಕ್ಕಿಗೆ ಚ್ಯುತಿ ತಂದಿದ್ದಾರೆ. ಈ ಬಗ್ಗೆ ವಿಧಾನಸಭಾ ಅಧ್ಯಕ್ಷರಿಗೆ ದೂರು ನೀಡುವುದಾಗಿ ತಿಳಿಸಿದರು.
ಬೇಜವಾಬ್ದಾರಿ ಹೇಳಿಕೆ:  ಇತ್ತೀಚೆಗೆ ಪರವಾನಗಿ ಇಲ್ಲದೆ ಮರಳು ಸಾಗಿಸುತ್ತಿದ್ದ ಮರಳು ಲಾರಿಗಳ ವಶಪಡಿಸಿಕೊಂಡು ನಂತರ ಬಿಡುಗಡೆಗೊಳಿಸಿದ್ದು ಜೆಡಿಎಸ್ ಒತ್ತಡದಿಂದ ಎಂದು ತಹಸೀಲ್ದಾರ್ ಮಂಜುನಾಥ್ ವಿನಾಕಾರಣ ತಮ್ಮ ಮೇಲೆ ಆರೋಪ ಮಾಡಿದ್ದಾರೆ. ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ವಿಧಾನಸಭಾಧ್ಯಕ್ಷರಿಗೆ ನೀಡುವ ದೂರಿನಲ್ಲಿ ತಿಳಿಸುವುದಾಗಿ ಶಾಸಕರು ಹೇಳಿದರು.
ತಾಲೂಕು ತಹಸೀಲ್ದಾರ್ ಪುರದಮ್ಮ ದೇವಾಲಯದ ಬಗ್ಗೆ ಮೊದಲು ಈ ಭಾಗದ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ ಇದು ಕುಟುಂಬದಿಂದ, ತಲಾ ತಲಾಂತರದಿಂದ ಬಂದಿರುವುದೇ, ಗ್ರಾಮ ದೇವತೆಯೆ ವಂಶ ಪರಂಪರೆಯ ಇತಿಹಾಸ ಇರಬಹುದೆ ಇಲ್ಲವೆ ಮುಜರಾಯಿ ಇಲಾಖೆಗೆ ಸೇರಿರುವುದಕ್ಕೆ ಸರ್ಕಾರಿ ದಾಖಲೆ ಇರುವ ಎಲ್ಲವನ್ನೂ ಪರಿಶೀಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.  ಏನೇ ಕೆಲಸ ಮಾಡಿದರೂ ಜವಾಬ್ಧಾರಿಯುತವಾಗಿ ನಿರ್ವಹಿಸಬೇಕು. ಪುರದಮ್ಮ ದೇವಾಲಯಕ್ಕೆ ಎಲ್ಲಾ ಜನಾಂಗದವರು ಹಾಗೂ  ರಾಜ್ಯದ ನಾನಾ ಭಾಗಗಳಿಂದ ಬಂದು ಪೂಜೆ ಸಲ್ಲಿಸುತ್ತಾರೆ. ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಬೇಕಿತ್ತು. ಅದನ್ನು ಬಿಟ್ಟು ಕೇವಲ ಮೂಕರ್ಜಿಗೆ ಇಂತಹ ನಿರ್ಧಾರ ಕೈಕೊಂಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಹೊನ್ನವಳ್ಳಿ ಸತೀಶ್, ಜಿಪಂ ಮಾಜಿ ಉಪಾಧ್ಯಕ್ಷ ಎಸ್. ದ್ಯಾವೇಗೌಡ ಇತರರು ಇದ್ದರು.


ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸೇರಿದ ಎಚ್.ಕೆ. ಜವರೇಗೌಡರು ಮತ್ತು ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಅವರು, ಜೆಡಿಎಸ್ನಲ್ಲಿದ್ದಾಗ ಪತ್ರಗಳ ಮೂಲಕ ಭಯಾನಕ ರೀತಿಯಲ್ಲಿ ಆರೋಪ ಪ್ರತ್ಯಾರೋಪ ಮಾಡಿಕೊಂಡರು. ಹೀಗೆ ಪ್ರೇಮ ಪತ್ರ ಬರೆದುಕೊಂಡಿದ್ದು ಕಪಟ ನಾಟಕ ಎಂಬುದು ಈಗ ಜನರಿಗೆ ಅರ್ಥವಾಗಿದೆ. ಈ ಇಬ್ಬರು ಮುಖಂಡರು ಸೇರಿಕೊಂಡು ಅಕ್ರಮ ಮರಳು ಮತ್ತು ಮರ ಸಾಗಾಣಿಕೆ ಕೃತ್ಯದಲ್ಲಿ ತೊಡಗಿದ್ದಾರೆ
ಟಿ  ಎಚ್.ಎಸ್. ಪ್ರಕಾಶ್, ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement