ಕೆಲ ದಿನಗಳಲ್ಲಿ ಸರ್ಕಾರ ಪಥನ: ಡಿವಿಎಸ್ ಭವಿಷ್ಯ
ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ದರ್ಪದ ರಾಜಕಾರಣ ನಡೆಯುತ್ತಿದ್ದು, ಇದರ ಪರಿಣಾಮವಾಗಿ ಕೆಲ ದಿನಗಳಲ್ಲೆ ಸರ್ಕಾರ ಪಥನಗೊಳ್ಳಲಿದೆ ಎಂದು ಮಾಜಿ ಮುಖ್ಯುಮಂತ್ರಿ ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ.
ಪೊಲೀಸ್ ವರ್ಗಾವಣೆ ಸೇರಿದಂತೆ ಎಲ್ಲವನ್ನು ಗಮನಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ. ಕೇಂದ್ರದಂತೆ ರಾಜ್ಯ ಸರ್ಕಾರ ಕೂಡಾ ಹದಗೆಟ್ಟಿದೆ ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಸುಗ್ರೀವಾಜ್ಞೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ಗಾಂಧಿ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಅದನ್ನು ಹಿಂದಕ್ಕೆ ತೆಗೆದುಕೊಂಡಿದ್ದು ಚುನಾವಣೆ ತಂತ್ರವಾಗಿದೆ. ಎಂದು ವ್ಯಂಗ್ಯವಾಡಿದರು. ಲೋಕಾಯುಕ್ತ ವರದಿಯಲ್ಲಿ ಹೆಸರು ಇರುವ ಸಚಿವ ಸಂತೋಷ್ಲಾಡ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ರಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲವಾಗಿ ನಿಂತಿರುವುದು ಸರಿಯಾದುದಲ್ಲ. ಈ ನಿರ್ಧಾರದಿಂದ ರಾಜ್ಯ ಸರ್ಕಾರಕ್ಕೆ ಕಂಟಕವಾಗಲಿದೆ ಎಂದು ನುಡಿದರು.