ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೋಮು ದೌರ್ಜನ್ಯ ತಪ್ಪಿಸುವಲ್ಲಿ ಪಿಯುಸಿಎಲ್ ಕಾರ್ಯ ಶ್ಲಾಘನೀಯ: ನಿವೃತ್ತ ನ್ಯಾ. ಸಾಲ್ಡಾನ

Rashmi Kasaragodu
Updated On : 4 Oct 2013, 12:54 pm

ಕನ್ನಡಪ್ರಭ ವಾರ್ತೆ೤ ಹಾಸನ೤ ಅ. 3
ದೇಶದಲ್ಲಿ ಕೋಮು ದೌರ್ಜನ್ಯ ತಪ್ಪಿಸುವಲ್ಲಿ ಪಿಯುಸಿಎಲ್ ಕಾರ್ಯ ಶ್ಲಾಘನೀಯವಾದುದು ಎಂದು ನಿವೃತ್ತ ನ್ಯಾಯಮೂರ್ತಿ ಪಿ.ಎಫ್. ಸಾಲ್ಡಾನ ತಿಳಿಸಿದರು.ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪಿಯುಸಿಎಲ್ ಜಿಲ್ಲಾ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು,  40 ವರ್ಷಗಳಿಂದ ಪಿಯುಸಿಎಲ್ ನಡೆಸಿರುವ ಹೋರಾಟಗಳನ್ನು ವಿವರಿಸಿ, ದೇಶದಲ್ಲಿ ಕೋಮುದೌರ್ಜನ್ಯ ತಪ್ಪಿಸಲು  ಪಿಯುಸಿಎಲ್ ಉತ್ತಮ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಪಿಯುಸಿಎಲ್ ರಾಜ್ಯಾಧ್ಯಕ್ಷ  ಪಿ.ಬಿ. ಷಾ ಮಾತನಾಡಿ,  ಪಿಯುಸಿಎಲ್ ನಡೆಸಿರುವ ಹೋರಾಟಗಳೆಲ್ಲವೂ ಬಹುತೇಕ ಯಶಸ್ವಿಯಾಗಿದ್ದು  ಕೇಂದ್ರ ಇತ್ತೀಚೆಗೆ ಜಾರಿಗೆ ತಂದ ಆಹಾರ ಭದ್ರತೆ ಕಾಯ್ದೆ ಕೂಡ 2001ರಲ್ಲಿ ರಾಜಸ್ಥಾನದ ಪಿಯುಸಿಎಲ್ ಘಟಕ ಸುಪ್ರೀಂ ಕೋರ್ಟ್ನಲ್ಲಿ ಹೂಡಿದ್ದ ಸಾರ್ವಜನಿಕ ಹಿತಾಸಕ್ತಿಯ ರೂಪವೆಂದರು. ಇತ್ತೀಚೆಗೆ ಸುಪ್ರಿಂ ಕೋರ್ಟ್ ಆದೇಶಿಸಿರುವ ಕಳಂಕಿತರ ಅನರ್ಹತೆ ಹಾಗೂ ಮತದಾರರಿಗೆ ಕಳಂಕಿತರನ್ನು ತಿರಸ್ಕರಿಸುವ ಹಕ್ಕು ನೀಡಿದ ಆದೇಶವೂ ಕೂಡಾ ಪಿಯುಸಿಎಲ್ ಘಟಕದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪರಿಣಾಮ ಎಂದು ಹೇಳಿದರು.
ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಹಾಗೂ ವಿಚಾರವಾದಿ ಕೆ.ಟಿ. ಶಿವಪ್ರಸಾದ್ ಮಾತನಾಡಿ, ಸಮಾಜದಲ್ಲಿ ಸಾಮಾಜಿಕ ನ್ಯಾಯದೊಂದಿಗೆ ನೊಂದವರಿಗೆ ನ್ಯಾಯಲಯದ ನ್ಯಾಯ ದೊರೆತಾಗ ಉತ್ತಮ ಸಮಾಜಕಟ್ಟಲು ಸಾಧ್ಯವೆಂದು ಪ್ರತಿಪಾದಿಸಿದರು.
ಪ್ರತಿಯೊಬ್ಬರಿಗೂ ಸಮಾನ ಆಯ್ಕೆ ಅವಕಾಶಗಳು ದೊರೆತಾಗ ಮಾತ್ರ ಸ್ವಾತಂತ್ರ ಲಭಿಸುತ್ತದೆ. ಬೇರೆಯವರ ಆಯ್ಕೆ ಅವಕಾಶಗಳಿಗೆ ಮಾರಕವಾಗಿದ್ದಾಗ ನ್ಯಾಯ ನೀತಿಗೆ ಧಕ್ಕೆಯಾಗುತ್ತದೆ ಎಂದು ವಿವರಿಸಿದ ಅವರು  ಎಲ್ಲಿಯವರೆಗೆ ನ್ಯಾಯಕ್ಕಾಗಿ ಹೋರಾಟ ಮಾಡುವ ಶಕ್ತಿ ಇರುತ್ತದೆಯೋ ಅಲ್ಲಿವರೆಗೆ  ಯಾರು ಯಾರಿಗೂ ಭಯ ಪಡುವ ಅಗತ್ಯವಿಲ್ಲವೆಂದು ಕರೆ ನೀಡಿದರು.
 ಮುಖ್ಯ ಅತಿಥಿ ಜಿಲ್ಲಾ ಎಸ್ಪಿ ರವಿ ಚೆನ್ನಣ್ಣನವರ್ ಮಾತನಾಡಿ, ಉತ್ತಮ ಸಮಾಜ ಕಟ್ಟಲು ಹೋರಾಟ ಅನಿವಾರ್ಯ. ಹೋರಾಟ ಸಕಾರಾತ್ಮಕವಾಗಿ ಮುಂದುವರೆದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದರಲ್ಲದೆ  ದೌರ್ಜನ್ಯ ತಡೆಗಟ್ಟುವಲ್ಲಿ ಶೋಷಿತರಿಗೆ ಧ್ವನಿಯಾಗುವುದು ಸಂಘಟನೆಗಳ ಕರ್ತವ್ಯವಾಗಿದ್ದು ಜನ ಪರ ಹೋರಾಟಕ್ಕೆ ಇಲಾಖೆ ಬೆಂಬಲವಿದೆ ಎಂದು ನುಡಿದರು.
ಲೇಖಕಿ ರೂಪಾ ಹಾಸನ್ ಮಾತನಾಡಿ, ಪಿಯುಸಿಎಲ್ ರಾಷ್ಟ್ರಾದ್ಯಂತ ನ್ಯಾಯಾಂಗ ಹೋರಾಟದ ಮೂಲಕ ಜನಪರ ಕಾಳಜಿ ಕೆಲಸ ಮಾಡುತ್ತಿರುವ ಸಂಘಟನೆ ಇದಾಗಿದ್ದು ಎಂದರು. ನ್ಯಾಯಾಂಗದ ಹೋರಾಟದ ಜೊತೆಗೆ  ಸಮಾಜದ  ಪ್ರಗತಿಗೆ ಶ್ರಮಿಸುತ್ತಿವೆ ಎಂದು ಹೇಳಿದರು.ಪತ್ರಕರ್ತ ಕೆ.ಎಚ್.ವೇಣುಕುಮಾರ್, ಮಾನವಹಕ್ಕುಗಳ ಹೋರಾಟಗಾರ ಮರಿಜೋಸೆಫ್, ಘಟಕ ಅಧ್ಯಕ್ಷ   ನಾಗರಾಜ ಹೆತ್ತೂರು, ಪ್ರಧಾನ ಕಾರ್ಯದರ್ಶಿ ಆರ್.ಪಿ.ಐ ಸತೀಶ್, ರಾಜ್ಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement