ಗ್ರಾಮೀಣ ಕೃಷಿ ಕಾರ್ಯಾನುಭವ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ತಂತ್ರಜ್ಞಾನ ತಿಳಿದು ಕೃಷಿ ಮಾಡಿದರೆ ಹೆಚ್ಚು ಆಹಾರ ಉತ್ಪನ್ನಗಳನ್ನು ಬೆಳೆಯಬಹುದು. ಇದರಿಂದ ರೈತರಿಗೆ ಹೆಚ್ಚು ಆರ್ಥಿಕ ಲಾಭ ಸಿಗುತ್ತದೆ ಎಂದು ಜಿಪಂ ಸದಸ್ಯೆ ಕುಸುಮಾ ಬಾಲಕೃಷ್ಣ ತಿಳಿಸಿದರು.ಇಲ್ಲಿಗೆ ಸಮೀಪದ ವಿರುಪಾಕ್ಷಿಪುರದ ಶಾಲಾ ಆವರಣದಲ್ಲಿ ನಡೆದ ಕೃಷಿ ವಸ್ತು ಪ್ರದರ್ಶನ, ಅಂತಿಮ ಕೃಷಿ ಪದವಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜನಸಂಖ್ಯೆ ಹೆಚ್ಚುತ್ತಿದ್ದು ಆಹಾರ ಪದಾರ್ಥಗಳಿಗೆ ಬೇಡಿಕೆ ಇದ್ದರೂ ರೈತರು ಬೆಳದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಸರ್ಕಾರ ರೈತರ ಬೆಳೆದ ಬೆಳೆಗಳಿಗೆ ಬೆಂಬಲಬೆಲೆ ನಿಗದಿ ಪಡಿಸಬೇಕು ಎಂದರು.ಹಾಸನ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಲ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಡಾ. ರಘುಪತಿ, ಡಾ. ನಟರಾಜ್, ಗ್ರಾಪಂ ಅಧ್ಯಕ್ಷೆ ಶೋಭಾ ರಾಜಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಆರ್.ದೊರೆಸ್ವಾಮಿ, ಗ್ರಾಪಂ ಉಪಾಧ್ಯಕ್ಷ ಯಲ್ಲಯ್ಯ, ಸೌಮ್ಯ, ಶ್ರೀನಿವಾಸ, ರಾಘವೇಂದ್ರ ಇದ್ದರು.
'ಉದ್ಯೋಗಕ್ಕಾಗಿ ವಿದ್ಯಾಭ್ಯಾಸ ಸಲ್ಲದು'
ಚನ್ನರಾಯಪಟ್ಟಣ: ವಿದ್ಯಾರ್ಥಿಗಳು ಕೇವಲ ಉದ್ಯೋಗ ನಿರೀಕ್ಷೆಗಾಗಿ ತಮ್ಮ ವಿದ್ಯಾಭ್ಯಾಸವನ್ನು ಗುರಿಯಾಗಿಟ್ಟುಕೊಳ್ಳಬಾರದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎನ್.ಲೋಕೇಶ್ ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ತಾಲೂಕು ಕಸಾಪ ಹಾಗೂ ಕಾಲೇಜಿನ ಕುವೆಂಪು ವೇದಿಕೆ ವತಿಯಿಂದ ಏರ್ಪಡಿಸಿದ್ದ ಕ್ಯಾನ್ಸರ್ ಹಾಗೂ ಆರೋಗ್ಯ ಜೀವನ ಕ್ರಮ ಮತ್ತು ಕನ್ನಡ ಸಾಹಿತ್ಯದ ಹುಟ್ಟು ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯೆ ಕೇವಲ ಉದ್ಯೋಗಕ್ಕೆಂದು ಭಾವಿಸದೆ ನಾಡು, ನುಡಿ ಹಾಗೂ ದೇಶದ ಅಭಿವೃದ್ಧಿಯತ್ತಾ ತಮ್ಮ ಗಮನ ಹರಿಸಬೇಕು ಎಂದು ತಿಳಿಸಿದರು. ಹಾಸನ ವೈದ್ಯಕೀಯ ಕಾಲೇಜಿನ ಡಾ.ಜಗದೀಶ್ ಉಪನ್ಯಾಸ ನೀಡಿದರು. ಸಂಶೋಧಕ ಡಾ. ವತ್ಸ ಎನ್.ಡಿ, ಪ್ರಾಂಶುಪಾಲ ಉಮಾಕಾಂತ್, ಉಪನ್ಯಾಸಕ ನಂಜುಂಡಪ್ಪ, ಕಸಾಪ ಪದಾಧಿಕಾರಿಗಳಾದ ಶಿವರಾಂ, ಪ್ರಕಾಶ್, ಜಯರಾಂ ಇದ್ದರು.
ಮಡಿವಾಳ ಜನಾಂಗದಿಂದ ಪುರಸ್ಕಾರ
ಹಾಸನ: ಜಿಲ್ಲಾ ಮಡಿವಾಳ ಜನಾಂಗದ ನಿವೃತ್ತ ಹಾಗೂ ಹಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಭಾನುವಾರ ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಪ್ರೊ.ರಾಮಯ್ಯ ಉದ್ಘಾಟಿಸಿ, ಜಾಗತಿಕ ಜಗತ್ತಿನಲ್ಲಿ ಯಶಸ್ವಿಯ ಹಾದಿ ತುಳಿಯಬೇಕಾದರೆ ವಿದ್ಯಾರ್ಜನೆ ಬಹಳ ಮುಖ್ಯವಾಗಿದೆ. ಯಶಸ್ಸಿನ ಹಾದಿಯಲ್ಲಿ ವಿದ್ಯಾರ್ಥಿಗಳು ಹೋಗುವಾಗ ಅಡ್ಡಿ ಆತಂಕಗಳು ಎದುರಾಗುವುದು ಸಹಜ. ಅದನ್ನು ಎದುರಿಸಿ ವಿದ್ಯಾರ್ಥಿಗಳು ಮುಂದೆಬರಬೇಕು. ಅದಕ್ಕೆ ಆತ್ಮವಿಶ್ವಾಸ ಬಹಳ ಮುಖ್ಯವಾಗಿದೆ ಎಂದು ಹೇಳಿದರು. ಸಂಘದ ಅಧ್ಯಕ್ಷ ಡಿ.ರಾಮಚಂದ್ರ, ತಾಪಂ ಸದಸ್ಯೆ ಸರೋಜಮ್ಮ, ನಗರಸಭೆ ಸದಸ್ಯ ಪ್ರಸನ್ನ ಕುಮಾರ್ ಇತರರು ಇದ್ದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟನೆ
ಆಲೂರು: ವಿದ್ಯಾರ್ಥಿಗಳು ಎಚ್ಚರಿಕೆಯಿಂದ ತಮ್ಮ ಚಾರಿತ್ರ್ಯ ನಿರ್ಮಾಣ ಮತ್ತು ಆದರ್ಶದೆಡೆಗೆ ಗಮನ ಕೊಟ್ಟಲ್ಲಿ ತಮ್ಮ ಉದ್ದೇಶವನ್ನು ಸಾಕಾರಗೊಳಿಸಬಹುದೆಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು. ಅವರು ಪಟ್ಟಣದ ಒಕ್ಕಲಿಗರ ಸಮುದಾಯಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಪಾತ್ರ ಅತಿಮುಖ್ಯ. ಶಿಕ್ಷಕ ಹಾಗೂ ಪೋಷಕರು ಮಕ್ಕಳ ಬಗ್ಗೆ ಗಮನ ಹರಿಸಿದರೆ ಮಕ್ಕಳು ಸತ್ಪ್ರಜೆಗಳಾಗುತ್ತಾರೆಂದರು. ಜಿಲ್ಲಾ ಒಕ್ಕಲಿಗ ಸಂಘದ ಧ್ಯಕ್ಷ ಜಿ.ಎಲ್.ಮುದ್ದೇಗೌಡ ಮಾತನಾಡಿ, ಸಮಾಜವನ್ನು ಬೆಳೆಸಲು ಆಯಾ ಸಮಾಜ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು. ಉಪನ್ಯಾಸಕ ಎನ್.ಪುಟ್ಟರಾಜು ಮಾತನಾಡಿ, ಪ್ರತಿ ವ್ಯಕ್ತಿಯಲ್ಲೂ ಒಂದಲ್ಲಾ ಒಂದು ಪ್ರತಿಭೆ ಸುಪ್ತವಾಗಿರುತ್ತದೆ ಅದನ್ನು ಗುರುತಿಸಿ, ಅದನ್ನು ಸಾಕಾರಗೊಳಿಸುವಲ್ಲಿ ಪೋಷಕರ ಪ್ರೋತ್ಸಾಹ ಅಗತ್ಯವೆಂದರು. ಎಸ್ಸೆಸ್ಸೆಲ್ಸಿಯಲ್ಲಿ ಶೇ70ಕ್ಕಿಂತ ಹೆಚ್ಚು ಹಾಗೂ ಪಿಯುಸಿಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಒಕ್ಕಲಿಗ ವಿದ್ಯಾರ್ಥಿಗಳಿಗೆ ಸ್ವಾಮೀಜಿ ಪ್ರತಿಭಾ ಪುರಸ್ಕಾರ ಇತ್ತು ಸನ್ಮಾನಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕಿ ಎಚ್.ಡಿ.ದಾಕ್ಷಾಯಿಣಿ, ಗ್ರಾಮ ಲೆಕ್ಕಿಗ ನಂಜೇಗೌಡ, ತಾಪಂ ಉಪಾಧ್ಯಕ್ಷೆ ನಾಗಮ್ಮ, ಕೆ.ವೈ.ಲಕ್ಷ್ಮೇಗೌಡ ಹಾಗೂ ಶಿವರಾಮೇಗೌಡ ಮುಂತಾದವರನ್ನು ಸನ್ಮಾನಿಸಲಾಯಿತು. ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಪಿ.ಮೋಹನ್,ಉಪಾಧ್ಯಕ್ಷ ಕೆ.ಎಸ್.ಮಂಜೇಗೌಡ,ಕಾರ್ಯದರ್ಶಿ ಎಚ್.ಎಸ್.ವಿರುಪಾಕ್ಷ, ಜಿಲ್ಲಾ ಸಂಘದ ಕಾರ್ಯದರ್ಶಿ ಅಪ್ಪೇಗೌಡ, ಎಚ್.ಜಯರಾಂ ಇತರರು ಇದ್ದರು.
ಮಹಿಳೆ ಮೇಲಿನ ದೌರ್ಜನ್ಯ: ಕಳವಳ
ಹೊಳೆನರಸೀಪುರ: ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲೆ ನಿತ್ಯವೂ ನಡೆಯುತ್ತಿರುವ ದೌರ್ಜನ್ಯ, ಶೋಷಣೆ, ಅತ್ಯಾಚಾರ ಮೇರೆ ಮೀರುತ್ತಿದ್ದು ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರಿ ಮುಂದಿನ ದಿನಗಳಲ್ಲಿ ಮಹಿಳೆಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹಾಸನದ ಮಲ್ನಾಡ್ ನರ್ಸಿಂಗ್ ಹೋಂ ವೈದ್ಯೆ ಡಾ.ಸಾವಿತ್ರಿ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯ ವಿಚಾರಣಾ ಸಮಿತಿ ಅಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಕೃತ್ಯಗಳಿಗೆ ಬಹಳಷ್ಟು ಕಾರಣಗಳು ಇದ್ದು ಅವುಗಳನ್ನು ಸರಿಪಡಿಸಬೇಕಾದ ಕರ್ತವ್ಯ ಸಮಾಜದ ಹಿರಿಯರು, ಬುದ್ಧಿಜೀವಿಗಳು ಮತ್ತು ಗಣ್ಯರ ಮೇಲಿದೆ ಎಂದು ನುಡಿದರು.
ಪ್ರಸ್ತುತ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ವಿಷಾದನೀಯ ಸಂಗತಿ. ಜಿಲ್ಲೆಯಲ್ಲಿ ಹೆಣ್ಣು ಮಕ್ಕಳು ಕಾಣೆಯಾಗುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಅಧಿಕವಾಗುತ್ತಿದೆ. ಅಲ್ಲದೇ ಜಿಲ್ಲೆಯಲ್ಲಿ ಅರವತ್ತಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿದೆ. ಇಂತಹ ಪ್ರಕರಣಗಳಿಗೆ ಶಾಶ್ವತ ಪರಿಹಾರ ದೊರಕಬೇಕಾದದ್ದೇ ಅದಲ್ಲಿ ಹೆಣ್ಣು ತನ್ನ ಧನಿಯೆತ್ತಿ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಟ ಮಾಡಿದಾಗ ಮಾತ್ರವೇ ಅಲ್ಪಸ್ವಲ್ಪ ಪರಿಹಾರ ಕಾಣಲು ಸಾಧ್ಯವಾಗಲಿದೆ ಎಂದರು. ಮುಖ್ಯ ಅತಿಥಿ ಅನನ್ಯ ಟ್ರಸ್ಟ್ ಅಧ್ಯಕ್ಷೆ ಕೆ.ಟಿ.ಜಯಶ್ರೀ ಮಾತನಾಡಿ, ಪರಸ್ಪರ ಸಹಕಾರ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆಯತ್ತಾ ಗಮನ ಹರಿಸಬೇಕೆಂದು ಮನವಿ ಮಾಡಿದರು. ಪ್ರಾಂಶುಪಾಲ ಪ್ರೊ.ಎಂ.ಬಿ.ಇರ್ಷಾದ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವೇದಿಕೆ ಸಂಚಾಲಕಿ ಪ್ರೊ.ಪೂರ್ಣಿಮ, ಪ್ರೊ. ಪಿ.ಆರ್.ಶಾಂತ, ಅರುಂಧತಿ ಇದ್ದರು.
'ಹೊಯ್ಸಳ ವಾಸ್ತುಶಿಲ್ಪ ವಿಶಿಷ್ಟತಮ'
ಹಾಸನ: ಸೂಕ್ಷ್ಮ ಕೆತ್ತನೆ, ವೈವಿಧ್ಯಮಯ ವಾಸ್ತು ಶಿಲ್ಪಗಳ ಅಲಂಕಾರಗಳಿಂದ ಕೂಡಿದ ಹೊಯ್ಸಳ ವಾಸ್ತುಶಿಲ್ಪ ವಿಶ್ವದಲ್ಲಿಯೇ ಅತಿ ವಿಶಿಷ್ಟವಾದುದು ಎಂದು ಹೊಳೆನರಸೀಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಬಿ.ಇರ್ಷಾದ್ ಹೇಳಿದರು. ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಹಾಸನದ ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಸ್ಕೃತಿ ಪರಂಪರಾ ಕೂಟದ ವತಿಯಿಂದ ಮೊಸಳೆ ದೇವಾಲಯದಲ್ಲಿ ಆಯೋಜಿಸಿದ್ದ ಪರಂಪರಾ ಜಾಥಾ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮೊಸಳೆ ದೇವಾಲಯಗಳ ವಾಸ್ತುಶಿಲ್ಪ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿಕೊಟ್ಟ ಅವರು, ಹಾಸನ ಜಿಲ್ಲೆ ಹೊಯ್ಸಳ ವಾಸ್ತುಶಿಲ್ಪದ ತವರುಮನೆ. ಇಲ್ಲಿ ಅಸಂಖ್ಯಾತ ದೇವಾಲಯಗಳು ಅಂದಿನ ಶಿಲ್ಪಕಲೆಯ ಸೌಂದರ್ಯವನ್ನು ಜಗತ್ತಿಗೆ ಸಾರುತ್ತಿವೆ. ಈ ಜಿಲ್ಲೆಯ ಪ್ರತಿಯೊಬ್ಬರೂ ಈ ವಾಸ್ತುಶಿಲ್ಪದ ಜ್ಞಾನಿಗಳಾಗಬೇಕು ಎಂದರು.
ಯಾವುದೇ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕಾದರೆ ಪರಂಪರೆ ಅತ್ಯಗತ್ಯ. ಭಾರತೀಯ ಆಧ್ಯಾತ್ಮಿಕ ಸಿದ್ಧಾಂತ ಹಾಗೂ ನಿಸರ್ಗದ ಪರಂಪರೆ ವಿಶಿಷ್ಟ ವಾದುದು. ಇಂದಿನ ವಿದ್ಯಾರ್ಥಿಗಳು ಈ ಪರಂಪರೆಯನ್ನು ಗೌರವಿಸಿ, ಅದರ ಸರಿಯಾದ ಜ್ಞಾನ ಪಡೆದುಕೊಂಡು ಅದನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಜವಾಬ್ದಾರಿ ಹೊರಬೇಕಿದೆ ಎಂದು ಹೇಳಿದರು.
ಕನ್ನಡ ಪ್ರಾಧ್ಯಾಪಕ ಡಾ.ಡಿ. ಶ್ರೀನಿವಾಸ ಮಾತನಾಡಿ ಪರಂಪರೆ ನಮ್ಮ ಅಸ್ತಿತ್ವದ ಕುರುಹು. ನಮ್ಮನ್ನು ಈ ವಿಶ್ವ ಗುರುತಿಸುವುದೇ ನಮ್ಮ ಪರಂಪರೆಯ ಮೂಲಕ. ದೇಶದ ಯಾವುದೇ ಪ್ರಜೆ ಹೆಮ್ಮೆ ಪಡುವಂತಹ ಪರಂಪರೆ ನಮ್ಮದು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಂ.ಪಿ.ಗೋಪಾಲ್ ಮಾತನಾಡಿ ಇಂದು ಆಧುನಿಕತೆಯ ಆಕರ್ಷಣೆಯಲ್ಲಿ ಯುವ ಜನಾಂಗ ಸಂಸ್ಕೃತಿ ಹಾಗೂ ಪರಂಪರೆ ಗಳಿಂದ ಮುಖವಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಹೇಳಿದರು.ಎಂ. ಮಾದೇಗೌಡ ಸ್ವಾಗತಿಸಿದರು, ಸಮಾಜಶಾಸ್ತ್ರ ವಿಭಾಗದ ಹರಿಪ್ರಸಾದ್ ವಂದಿಸಿದರು.