ಪೌರ ಕಾರ್ಮಿಕರ ಪ್ರತಿಭಟನೆ - ಸ್ವಚ್ಛತಾ ಕಾರ್ಯ ಸ್ಥಗಿತ
ಕನ್ನಡಪ್ರಭ ವಾರ್ತೆ ಹಾಸನ ಅ.3
ತಮಗೆ ಇನ್ನೂ ನೀಡದಿರುವ ಸಂಬಳ ಮತ್ತು 6 ತಿಂಗಳ ತುಟ್ಟಿಭತ್ಯೆಕ್ಕೆ ಆಗ್ರಹಿಸಿ ನಗರಸಭೆ ಗುತ್ತಿಗೆ ಪೌರ ಕಾರ್ಮಿಕರು ಗುರುವಾರ ಸ್ವಚ್ಛತಾಕಾರ್ಯವನ್ನು ಸ್ಥಗಿತಗೊಳಿಸಿ ನಗರಸಭೆ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. 2 ತಿಂಗಳಿನಿಂದ ಗುತ್ತಿಗೆ ಪೌರಕಾರ್ಮಿಕರಿಗೆ ಸಂಬಳ ಹಾಗೂ ಆರು ತಿಂಗಳ ತುಟ್ಟಿಭತ್ಯೆ ನೀಡದೆ ಕುಟುಂಬ ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ದೂರಿದರು.
ನಗರಸಭೆ ಅಧಿಕಾರಿಗಳು ತಮ್ಮನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದ್ದು, ತಮ್ಮ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಯಾವುದೇ ಸವಲತ್ತು ನೀಡದೆ ವಂಚಿಸಲಾಗಿದೆ. ಸಂಗ್ರಹಿಸಿದ ಕಸವನ್ನು ವಿಂಗಡಿಸಲು ಸ್ತ್ರೀ ಮತ್ತು ಪುರುಷರನ್ನು ಬಳಸಿಕೊಳ್ಳಲಾಗುತ್ತಿದ್ದು, ಕೆಲಸ ನಿರ್ವಹಿಸುವಾಗ ಕೈಗೆ ಹಾಕುವ ಕವಚ, ಶೂ, ಮಾಸ್ಕ್ ಹಾಗೂ ಬಟ್ಟೆ ಉಡುಪು ನೀಡುತ್ತಿಲ್ಲ. ಇದರಿಂದ ರೋಗ ರುಜಿನಗಳು ಕಾರ್ಮಿಕರಲ್ಲಿ ಹೆಚ್ಚುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
89 ಗುತ್ತಿಗೆ ಪೌರ ಕಾರ್ಮಿಕರು: ನಗರದಲ್ಲಿ ಜನಸಂಖ್ಯೆ ಹೆಚ್ಚಿದಂತೆ ಕಸದ ರಾಶಿ ಹಾಗೂ ಸ್ವಚ್ಚತೆಯ ಕೆಲಸ ಕೂಡಾ ಹೆಚ್ಚಾಗುತ್ತದೆ. ಅದರಂತೆ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. 89 ಗುತ್ತಿಗೆ ಪೌರ ಕಾರ್ಮಿಕರಿದ್ದು, ನಗರವನ್ನೆಲ್ಲಾ ಸ್ವಚ್ಛ ಮಾಡಲು ತುಂಬಾ ಕಷ್ಟದ ಕೆಲಸವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಕೆಲ ದಿನಗಳ ಹಿಂದೆ ನಗರಸಭೆ ಪೌರಾಯುಕ್ತ ನಾಗಭೂಷಣ್ ಹಾಗೂ ಅಧ್ಯಕ್ಷೆ ಶ್ರೀವಿದ್ಯಾ ಅ 2ಕ್ಕೆ ಗುತ್ತಿಗೆ ಪೌರ ಕಾರ್ಮಿಕರ ಸಂಬಳ ನೀಡುವುದಾಗಿ ಹೇಳಿದ್ದರು. ಕೆಲಸ ನಿರ್ವಹಿಸುವಾಗ ಕಾರ್ಮಿಕರು ಉಪಯೋಗಿಸುವ ಕೈಗೆ ಹಾಕುವ ಕವಚ, ಮಾಸ್ಕ್ ಹಾಗೂ ಬಟ್ಟೆ ಉಡುಪನ್ನು ಶೀಘ್ರದಲ್ಲಿಯೇ ನೀಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಹಿಷ್ಕರಿಸಿದ್ದ ಕೆಲಸವನ್ನು ವಾಪಸ್ ಪಡೆದು ಕರ್ತವ್ಯ ನಿರ್ವಹಿಸಲಾಯಿತು. ಹೇಳಿರುವ ಹಾಗೇ ನಿಗದಿತ ಸಮಯದಲ್ಲಿ ಸಂಬಳ ನೀಡಿಲ್ಲ ಎಂದು ದೂರಿದರು. ಶುಕ್ರವಾರ ಮಹಾಲಯ ಅಮಾವಾಸ್ಯೆ ಹಬ್ಬವಿದ್ದು, ಸಂಬಳ ಇಲ್ಲದೆ ನಾವು ಕಷ್ಟದ ಪರಿಸ್ಥಿತಿಯಲ್ಲಿ ಎದುರಿಸಬೇಕಾಗಿದೆ. ಕೂಡಲೇ ಗುತ್ತಿಗೆ ಪೌರ ಕಾರ್ಮಿಕರಿಗೆ ನೀಡಬೇಕಾದ ಪೂರ್ತಿ ಹಣವನ್ನು ನೀಡದೆ ನಾವು ಕೆಲಸ ಮಾಡುವುದಿಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಕಸ ವಿಲೇವಾರಿ ಮಾಡುವ ಟ್ರಾಕ್ಟರ್ಗಳನ್ನು ನಗರದ ಜಿಲ್ಲಾ ಗ್ರಂಥಾಲಯ ಮುಂದೆ ಸಾಲು ಸಾಲಾಗಿ ನಿಂತಿರುವುದು ಕಂಡು ಬಂತು. ಇದಕ್ಕೂ ಮೊದಲು ಬೆಳಗ್ಗೆ 89 ಕಾರ್ಮಿಕರು ಸ್ವಚ್ಛತಾ ಕಾರ್ಯ ನಿರ್ವಹಿಸದೇ ಸಾಮೂಹಿಕವಾಗಿ ಕೆಲಸ ಬಹಿಷ್ಕರಿಸಿ ನಗರದ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ಸೇರಿದರು. ಪ್ರತಿಭಟನೆ ನೇತೃತ್ವವನ್ನು ಸಿಐಟಿಯು ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಅರವಿಂದ್ ವಹಿಸಿದ್ದರು.
10 ಸಾವಿರ ನೀಡಿಕೆ: ಪ್ರತಿಭಟನೆ ಹಿಂದಕ್ಕೆ
ಗುರುವಾರ ಸಂಜೆ ಶಾಸಕ ಎಚ್.ಎಸ್. ಪ್ರಕಾಶ್, ನಗರಸಭೆ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಗುತ್ತಿಗೆ ಕಾರ್ಮಿಕರಿಗೆ ತಲಾ 10 ಸಾವಿರ ರು. ನೀಡಲಾಯಿತು. ಉಳಿದ ಹಣವನ್ನು ಸೆ.5 ರಂದು ನೀಡುವ ಭರವಸೆ ನೀಡಲಾಯಿತು. ಇದಕ್ಕೆ ಒಪ್ಪಿ ಗುತ್ತಿಗೆ ಪೌರ ಕಾರ್ಮಿಕರು ಪ್ರತಿಭಟನೆ ಹಿಂದಕ್ಕೆ ಪಡೆದರು.