'ಮೂಲ ಸೌಲಭ್ಯದಿಂದ ಗ್ರಾಮೀಣ ಪ್ರದೇಶಗಳು ವಂಚಿತ'
ಸಕಲೇಶಪುರ: ಅಗ್ಗದ ಪ್ರಚಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿರುವುದರಿಂದ ಇದುವರೆಗೆ ಗ್ರಾಮೀಣ ಪ್ರದೇಶಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಕೊಲ್ಲಹಳ್ಳಿ ಗ್ರಾಮದಲ್ಲಿ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 6 ದಶಕ ಕಳೆದರು ಇಂದಿಗೂ ಬಹುತೇಕ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಗ್ರಾಮಗಳ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿಗಳು ರಚನೆಯಾದರೂ ಗ್ರಾಮ ಪಂಚಾಯ್ತಿಗಳಿಗೆ ಇದುವರೆಗೆ ಯಾವುದೇ ಅನುದಾನ ನೀಡದೆ ವಂಚಿಸಿದ ಪರಿಣಾಮ ಗ್ರಾಮಗಳು ಹಿಂದುಳಿಯಲು ಕಾರಣವಾಗಿದೆ ಎಂದರು. ಉದ್ಯೋಗ ಖಾತ್ರಿ ಯೋಜನೆ ಗ್ರಾಮಗಳ ಅಭಿವೃದ್ಧಿಗೆ ಆಶಾದಾಯಕವಾಗಿದ್ದು, ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಗ್ರಾಪಂಗಳು ಗ್ರಾಮದ ಮೂಲಭೂತ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರು. ಮಳಲಿ ಗ್ರಾಪಂ ಅಧ್ಯಕ್ಷ ರಘು ಮುಖಂಡ ಯಾದ್ಗಾರ್ ಇಬ್ರಾಹಿಂ, ಸುನಿಲ್, ಬಾಲರಾಜ್, ಮಹಮ್ಮದ್ ಇದ್ದರು.