'ವಚನಕಾರರಿಂದ ಸಾಮಾಜಿಕ ಅಂಕುಡೊಂಕು ತಿದ್ದುವ ಕೆಲಸ'
ಕ.ಪ್ರ. ವಾರ್ತೆ ಹೊಳೆನರಸೀಪುರ, ಅ.3
ವಚನಗಳ ಮೂಲಕ ಸಾಮಾಜಿಕ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು 12 ನೇ ಶತಮಾನದ ವಚನಕಾರರು ಮಾಡಿದ್ದಾರೆ. ವಚನಗಳಲ್ಲಿ ನೀತಿ ಇದೆ, ಧರ್ಮವಿದೆ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಗಟ್ಟಿತನವಿದೆ ಎಂದು ಪ್ರಾಧ್ಯಾಪಕ ಡಾ.ಎಸ್.ಕೆ.ಭುವನೇಂದ್ರ ನುಡಿದರು.
ತಾಲೂಕು ವಚನ ಸಾಹಿತ್ಯ ಅಕಾಡೆಮಿ ತನ್ನ 28 ನೇ ವಚನಗಾಯನ ಕಾರ್ಯಕ್ರಮ ಹಳ್ಳಿಮೈಸೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ವಚನಗಳ ಸಾರವನ್ನು ತಿಳಿಯುವುದರಿಂದ ವಿದ್ಯಾರ್ಥಿಗಳ ಭೌದಿಕ ಮಟ್ಟ ಹೆಚ್ಚುವುದರ ಜತೆಗೆ ಸಮಾಜದ ಆಗು-ಹೋಗುಗಳ ಅರಿವು ಮೂಡಲು ಸಾದ್ಯವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎ.ಎಸ್.ರಾಜಶೇಖರ್ ಮಾತನಾಡಿ, ಇಂತಹ ವಚನ ಗಾಯನದಂದು ವಿದ್ಯಾರ್ಥಿಗಳ ನೈತಿಕ ಮಟ್ಟದ ಸುಧಾರಣೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದ ಅವರು ಇಂದು ವಿದ್ಯಾರ್ಥಿಗಳು ಹಾಡಿದ ವಚನಗಳಿಗೆ ಸಂಗೀತರ ಹಿನ್ನೆಲೆ ದೊರಕಿದ್ದರೆ ಕಾರ್ಯಕ್ರಮ ಅತ್ಯಂತ ಸುಂದರವಾಗಿ ಹಾಗೂ ಮಧುರವಾಗಿ ಮೂಡಿ ಬರುತ್ತಿತ್ತು ಎಂದು ಹೇಳಿದರು. ಉಪನ್ಯಾಸಕ ಎಚ್.ಎಸ್.ಪ್ರಭುಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹೊಳೆನರಸೀಪುರ ರೋಟರಿ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ ಅವರನ್ನು ವಚನ ಅಕಾಡೆಮಿ ಗೌರವಿಸಿ ಸನ್ಮಾನಿಸಿತು. ಶಿವಕುಮಾರಾಚಾರ್ ನಿರೂಪಿಸಿದರು. ವಚನ ಗಾಯನ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಬಿ.ಎಲ್.ರಮ್ಯ ಪ್ರಥಮ, ಎಂ.ಕೆ.ಅನಿತ ದ್ವಿತೀಯ, ಟಿ.ಪಿ.ಭಾವನ ತೃತೀಯ ಬಹುಮಾನ ಪಡೆದರು.