ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಾರಿಗೆ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ವರ್ತಕರ ಪ್ರತಿಭಟನೆ

Rashmi Kasaragodu
Updated On : 4 Oct 2013, 12:51 pm

ಕ.ಪ್ರ. ವಾರ್ತೆ೤ ಸಕಲೇಶಪುರ೤ ಅ.3
ತಾಲೂಕಿನಾದ್ಯಂತ ಇರುವ ಬಸ್ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿ ಜೈಭುವನೇಶ್ವರಿ ಯುವಕ ಸಂಘದ ನೇತೃತ್ವದಲ್ಲಿ ಹಳೇ ಬಸ್ ನಿಲ್ದಾಣ ಸಮೀಪ ವರ್ತಕರು ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಜನನಿಬಿಡ ಪ್ರದೇಶವಾದ ಹಳೇ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಬೇಕು.   ಬಸ್ ನಿಲುಗಡೆ ಇಲ್ಲದ ಪರಿಣಾಮ ವೃದ್ಧರು ಹಾಗೂ ಮಹಿಳೆಯರು ಬಸ್ ಹತ್ತಲು ಸಮಸ್ಯೆಯಾಗಿರುವ ಕಾರಣ ಅನಿವಾರ್ಯವಾಗಿ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು. ಪಟ್ಟಣದ ಎಸ್ಬಿಎಂ ಬ್ಯಾಂಕ್ ಸಮೀಪ ಬಸ್ ನಿಲುಗಡೆ ಮಾಡಲಾಗುತ್ತಿದೆ. ಇಲ್ಲಿ ರಸ್ತೆ ಅತಿ ಕಿರಿದಾಗಿದ್ದು ವೈನ್ಶಾಪ್ ಸಹ ಸಮೀಪದಲ್ಲೆ ಇರುವ ಕಾರಣ ಪ್ರಯಾಣಿಕರು ಕುಡುಕರ ಕಾಟ ಅನುಭವಿಸುವಂತಾಗಿದೆ.   ಅಲ್ಲದೆ ಅಪಘಾತಗಳ ತಾಣವಾಗಿ ಈ ಸ್ಥಳ ಪರಿವರ್ತನೆಯಾಗಿದೆ. ಆದ್ದರಿಂದ ಅನುಪಯುಕ್ತವಾಗಿರುವ ಹಳೇ ತಾಲೂಕು ಕಚೇರಿ ಕಟ್ಟಡವನ್ನು ನೆಲಸಮಗೊಳಿಸಿ, ಹಳೇ ಬಸ್ ನಿಲ್ದಾಣವನ್ನು ಒಟ್ಟುಗೂಡಿಸುವ ಮೂಲಕ ಪ್ರಯಾಣಿಕರ ಸಲುವಾಗಿ ಇಲ್ಲೇ ಬಸ್ ನಿಲುಗಡೆಮಾಡಬೇಕು ಎಂದು ಆಗ್ರಹಿಸಿದರು.
ಗ್ರಾಮಾಂತರ ಪ್ರದೇಶಗಳಿಗೆ ಹೋಗುವ ಎಲ್ಲ ಬಸ್ಗಳು  ಹಳೇ ಬಸ್ ನಿಲ್ದಾಣಕ್ಕೆ ಬಂದು ಹೋಗುವ ವ್ಯವಸ್ಥೆ ಕಲ್ಪಿಸಬೇಕು.  ನಗರ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಪಟ್ಟಣದಲ್ಲಿ ಮೀನಿನ  ಮುಕ್ತ ಮಾರುಕಟ್ಟೆ ತೆರೆಯಬೇಕು ಹಾಗೂ ಪಟ್ಟಣದ ಕಿರಿದಾದ ರಸ್ತೆಗಳಲ್ಲಿ ಸಂಚಾರಕ್ಕೆ ಅನಾನುಕೂಲವಾಗಿರುವುದರಿಂದ ಪಟ್ಟಣದಲ್ಲಿ ವಾಹನಗಳ ಉತ್ತಮ ಪಾರ್ಕಿಂಗ್ ಕಲ್ಪಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ನಂತರ ಈ ಸಂಬಂಧ ಉಪವಿಭಾಗಾಧಿಕಾರಿ ಶ್ರೀವಿದ್ಯಾ ಅವರಿಗೆ ಮನವಿ ಪತ್ರ ನೀಡಿದರು. ಪ್ರತಿಭಟನೆಗೂ ಮುನ್ನ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಹಳೇ ಬಸ್ ನಿಲ್ದಾಣವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನೆ ನೇತೃತ್ವವವನ್ನು ಜೈಭುವನೇಶ್ವರಿ ಸಂಘದ ಯೊಗೇಶ್, ಶುಭೇಂದ್ರ ನಾಯ್ಡು, ಸುನಿತಾ, ಹೈದರ್, ಸುಧಾಕರ್ ಇತರರು ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement