ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಾಸನ ಸರ್ಕಾರಿ ಕಾಲೇಜಿಗೆ ಪಾರಿತೋಷಕ

Rashmi Kasaragodu
Updated On : 4 Oct 2013, 12:47 pm

ಹೊಳೆನರಸೀಪುರ: ಶಿಕ್ಷಣ ಹಾಗೂ ಕ್ರೀಡೆಗಳೆರಡೂ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಿದ್ಯಾರ್ಥಿಗಳು ಶಿಕ್ಷಣದಷ್ಟೇ ಪ್ರಾಮುಖ್ಯತೆಯನ್ನು ಕ್ರೀಡೆಗೂ ನೀಡುವ ಮೂಲಕ ತಮ್ಮ ಭೌತಿಕ ಹಾಗೂ ಮಾನಸಿಕ ಸದೃಢತೆಯನ್ನು ಹೆಚ್ಚಿಸಿಕೊಳ್ಳುವಂತೆ ಜಿಪಂ ಮಾಜಿ ಸದಸ್ಯ ಹಾಗೂ ಹಿರಿಯ ಕ್ರೀಡಾಪಟು ಎಚ್.ವೈ.ಚಂದ್ರಶೇಖರ್ ತಿಳಿಸಿದರು.
 ಪಟ್ಟಣದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಪ್ರಾಯೋಜಕತ್ವದಲ್ಲಿ ಇಲ್ಲಿನ ಸೋಷಿಯಲ್ ಕ್ಲಬ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯ ಮಲೆನಾಡು ವಲಯ ಅಂತರ ಕಾಲೇಜುಗಳ ಪುರುಷರ ಮತ್ತು ಮಹಿಳೆಯರ ಷಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
 ಕ್ರೀಡೆಯು ಮನುಷ್ಯನ ಬದುಕಿಗೆ ಬಹುಮುಖ್ಯವಾದ ಅಂಶವಾಗಿದ್ದು, ಕ್ರೀಡೆಯನ್ನು ಮೈಗೂಡಿಸಿಕೊಂಡ ಪ್ರತಿಯೊಬ್ಬರೂ ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢರಾಗಿರುವ ಮೂಲಕ ದೇಶದ ಸದೃಢತೆಗೆ ಸಹಕಾರಿಯಾಗಿದ್ದಾರೆ ಎಂದು ಹೇಳಿದರಲ್ಲದೆ, ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ತೋರಿ ತಮ್ಮ ಕಾಲೇಜು, ಶಿಕ್ಷಕರು ಹಾಗೂ ಪೋಷಕರಿಗೆ ಕೀರ್ತಿ ತರುವಂತೆ ಶುಭ ಹಾರೈಸಿದರು.
  ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಚನ್ನವೀರಪ್ಪ  ಮಾತನಾಡಿ, ಸೋಲು ಗೆಲುವುಗಳ ಸಮ್ಮಿಶ್ರಣವಾದ ಕ್ರೀಡೆಯಲ್ಲಿ ಭಾಗವಹಿಸುವಿಕೆ ವಿದ್ಯಾರ್ಥಿಗಳಿಗೆ ಎಲ್ಲಕ್ಕಿಂತಲೂ ಬಹುಮುಖ್ಯವಾದ ಅಂಶವಾಗಿದ್ದು, ಫಲಿತಾಂಶಗಳು ಏನೇ ಬರಲಿ ಆದರೆ ಮೊದಲು ಭಾಗವಹಿಸುವ ಮನಸ್ಸು ಮುಖ್ಯವೆನಿಸುತ್ತದೆ ಎಂದರು.
 ಇದೇ ಸಂದರ್ಭದಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದಿಸಿದರು. ಮೈಸೂರು ವಿಶ್ವವಿದ್ಯಾಲಯ  ಮಲೆನಾಡು ವಲಯ ಅಂತರ ಕಾಲೇಜುಗಳ ಕ್ರೀಡಾಕೂಟದ ಸಂಚಾಲಕ  ಮಹೇಂದ್ರಕುಮಾರ್ ಕ್ರೀಡಾಕೂಟದ ಅಚ್ಚುಕಟ್ಟು ನಿರ್ವಹಣೆಯ ಕುರಿತಂತೆ ಗೃಹ ವಿಜ್ಞಾನ ಕಾಲೇಜಿನ ಶ್ರಮವನ್ನು ಶ್ಲಾಘಿಸಿದರು.
 ಕ್ರೀಡಾಕೂಟದಲ್ಲಿ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಹಾಸನದ ಎನ್.ಡಿ.ಆರ್.ಕೆ ಕಾಲೇಜಿನ ವಿದ್ಯಾರ್ಥಿಗಳು, ದ್ವಿತೀಯ ಸ್ಥಾನವನ್ನು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಡೆದು ಮೊದಲೆರಡು ಸ್ಥಾನವನ್ನು ಗಳಿಸಿದ ಈ ಕಾಲೇಜಿನ ವಿದ್ಯಾರ್ಥಿಗಳು ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡರೆ, ತೃತೀಯ ಸ್ಥಾನವನ್ನು ಚನ್ನರಾಯಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳಿಸಿತು.
 ಮಹಿಳೆಯರ ವಿಭಾಗದಲ್ಲಿ ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ, ಹಾಗೂ ಅರಸೀಕೆರೆಯ ಹೊಯ್ಸಳೇಶ್ವರ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಗೊಂಡರೆ, ತೃತೀಯ ಸ್ಥಾನವನ್ನು ಹಾಸನ ಎವಿಕೆ ಮಹಿಳಾ ಕಾಲೇಜು ತಂಡವು ಗಳಿಸಿತು. ಈ ತಂಡಗಳಿಗೆ ಪಾರಿತೋಷಕ, ಪ್ರಶಸ್ತಿ ಪತ್ರಗಳನ್ನು ಗಣ್ಯರು  ವಿತರಿಸಿದರು.
 ಪುರಸಭೆ ಸದಸ್ಯ ಹಾಗೂ ಯುವ ವಕೀಲ ಎ.ಶ್ರೀಧರ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ  ಎಂ.ಎಸ್.ಜಯಚಂದ್ರ, ಹಾಸನದ ಎನ್.ಡಿ.ಆರ್.ಕೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದಶಕ ಅಶೋಕ್ಕುಮಾರ್ ಹಾಗೂ ನಾನಾ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement