ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

37 ಗ್ರಾಪಂ ವ್ಯಾಪ್ತಿಯ 72 ಕೆರೆಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ

Rashmi Kasaragodu
Updated On : 4 Oct 2013, 11:57 am

ಬೇಲೂರು: ತಾಲೂಕಿನ 37 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 72 ಕೆರೆಗಳನ್ನು ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆ ರೂಪಿಸಿದ್ದು, ಆರಂಭಿಕವಾಗಿ ಜಗಳದಕಟ್ಟೆ ಕೆರೆ 14 ಲಕ್ಷ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ವೈ.ಎನ್. ರುದ್ರೇಶಗೌಡ ತಿಳಿಸಿದರು.
ಮಾದಿಹಳ್ಳಿ ಹೋಬಳಿ ಹುಲುಗುಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಿಮ್ಮನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಜಗಳದಕಟ್ಟೆ ಕೆರೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಗ್ರಾಮೀಣ ಜನರು ಆರ್ಥಿಕವಾಗಿ ಸದೃಢರಾಗಲು ಸರ್ಕಾರ ಕೆರೆಗಳಿಗೆ ಕಾಯಕಲ್ಪ ಯೋಜನೆ ಜಾರಿಗೊಳಿಸಿದ್ದು, ಇದರಿಂದ ರೈತರು ಹೆಚ್ಚು ಹೆಚ್ಚು ಆರ್ಥಿಕ ಬೆಳೆಗಳನ್ನು ಬೆಳೆದು ತಮ್ಮ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ಶೇ.70ರಷ್ಟು ರೈತರಿದ್ದು, ಕೃಷಿಯಲ್ಲೆ ಜೀವನ ನಡೆಸುವಂತಾಗಿದ್ದು, ಕೆರೆಗಳಲ್ಲಿ ನೀರು ಶೇಖರಣೆಯಾಗಿ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುವುದರಿಂದ ಕೇಂದ್ರ ಸರ್ಕಾರ ಇಂತಹ ಮಹತ್ತರ ಯೋಜನೆಯನ್ನು ಜಾರಿಗೊಳಿಸುವ ಮೂಲಕ ರೈತರ ಪರವಾಗಿ ನಿಂತಿದೆ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಡಿ. ಚಂದ್ರೇಗೌಡ ಮಾತನಾಡಿ, ಸರ್ಕಾರ ಗ್ರಾಮ ಪಂಚಾಯ್ತಿಗೆ ಹೆಚ್ಚು ಅನುದಾನ ಬಿಡುಗಡೆಗೊಳಿಸುತ್ತಿದ್ದು, ಕೆರೆ ಹೂಳು ತೆಗೆಯುವುದರ ಜೊತೆಗೆ ರಾಜ ಕಾಲುವೆ, ಸಿಮೆಂಟ್ ರಸ್ತೆ ನಿರ್ಮಾಣ ಮಾಡುತ್ತಿದ್ದು ರೈತರು ಇದಕ್ಕೆ ಸಹಕರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷ ಸುಮಿತ್ರ ರುದ್ರಯ್ಯ, ಹುಲುಗುಂಡಿ ಗ್ರಾಪಂ ಅಧ್ಯಕ್ಷ ಎಚ್.ಎಂ. ರಂಗೇಗೌಡ, ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಶಿವಣ್ಣ, ಪಂಚಾಯ್ತಿ  ಅಭಿವೃದ್ಧಿ ಅಧಿಕಾರಿ ಸುದರ್ಶನ್, ತಾಪಂ ವ್ಯವಸ್ಥಾಪಕ ಬೋರಣ್ಣಗೌಡ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement