ಇಲ್ಲಗಳ ಊರು ಚಾಮರಾಜಪುರ
ದಯಾಶಂಕರ ಮೈಲಿ
ಹಾಸನ: ಈ ಗ್ರಾಮವನ್ನು 'ಇಲ್ಲಗಳ ಊರೆಂದು' ಕರೆಯುವುದು ಸೂಕ್ತ. ಏಕೆಂದರೆ ಕನಿಷ್ಠ ಮೂಲ ಸೌಲಭ್ಯಗಳು ಇಲ್ಲದೇ ನಲುಗುತ್ತಿದೆ. ಸ್ವಚ್ಛತೆ ಇಲ್ಲ. ಕುಡಿಯುವನ ನೀರಿಲ್ಲ. ರಸ್ತೆಗಳು ಇಲ್ಲವೇ ಇಲ್ಲ, ಶೌಚಾಲಯಗಳು ಕೇಳಲೇಬೇಡಿ...
ಹಾಸನ ತಾಲೂಕು ಅಟ್ಟಾವರ ಹೊಸಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಚಾಮರಾಜಪುರದಲ್ಲಿ ಮೂಲ ಸೌಕರ್ಯಗಳು ಇಲ್ಲವಾಗಿದೆ. ಸ್ವಚ್ಛತೆ ಇಲ್ಲದ ಕಾರಣ ರೋಗರುಜಿನಗಳು ಹೆಚ್ಚಾಗಿದೆ. ಇದಕ್ಕೆ ಚಿಕಿತ್ಸೆ ಪಡೆಯಲು ಸೂಕ್ತ ಆಸ್ಪತ್ರೆ ವ್ಯವಸ್ಥೆ ಇಲ್ಲ. ಗ್ರಾಮ ಪಂಚಾಯ್ತಿ ಸರ್ಕಾರಗಳಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದಿರುವುದು, ಗ್ರಾಮ ಸಭೆಗಳು ನಡೆಯದೇ ಇರುವುದೇ ಇದಕ್ಕೆ ಕಾರಣ ಎಂದು ದೂರಲಾಗಿದೆ.
ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಪಂಚಾಯ್ತಿ ಸದಸ್ಯರು ಇರಲಿ, ಅಧಿಕಾರಿಗಳು ಇತ್ತ ಕಾಲು ಹಾಕಿಲ್ಲ, ತಲೆನೂ ಹಾಕಿಲ್ಲ. ಬಸ್ ವ್ಯವಸ್ಥೆ ಸರಿಯಿಲ್ಲದೇ ಮಕ್ಕಳು ಶಾಲೆ, ಕಾಲೇಜಿಗೆ ಹೋಗಲು ಆಗುತ್ತಿಲ್ಲ. ಗ್ರಾಮದ ನೀರಿನ ಟ್ಯಾಂಕ್ ಇದೆ. ಅದನ್ನು 3 ವರ್ಷಗಳಾದರೂ ಸ್ವಚ್ಛಗೊಳಿಸಿಲ್ಲ. ಇದರಿಂದ ರೋಗರುಜಿನಗಳು ಬರುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಸ್ವಸಹಾಯ ಸಂಘದವರು ಟ್ಯಾಂಕ್ ಕೊಂಚ ಸ್ವಚ್ಛಗೊಳಿಸಿದ್ದಾರೆ. ಆದರೆ ವಿದ್ಯುತ್ ಪೂರೈಕೆ ಇಲ್ಲದೇ ಕುಡಿಯುವ ನೀರು ಸರಬರಾಜು ಮಾಡುವುದು ಕಷ್ಟಕರವಾಗಿದೆ.
ಊರು ತೊರೆದ ಗ್ರಾಪಂ ಸದಸ್ಯರು: ಆಶ್ಚರ್ಯಕರ ಸಂಗತಿ ಅಂದ್ರೆ. ಕೌಟುಂಬಿಕ ಸಮಸ್ಯೆಯಿಂದ ನೊಂದ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯರು ಗ್ರಾಮವನ್ನು ತೊರೆದಿದ್ದಾರೆ. ಇದರಿಂದ ಜನರು ತಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳಿಕೊಳ್ಳಬೇಕು ಎಂಬ ಗೊಂದಲದಲ್ಲಿ ಮುಳುಗಿದ್ದಾರೆ. ಒತ್ತುವರಿ ಮಾಡಿಕೊಂಡಿರುವ ಪರಿಣಾಮ ಇದ್ದ ರಸ್ತೆಗಳು ಕಿರಿದಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ.
ಗ್ರಾಮದ ರಾಜಕುಮಾರ್ ಹೇಳುವುದು ಹೀಗೆ: ನೋಡಿ ಸ್ವಾಮಿ... ಇಲ್ಲಿ ಸ್ವಲ್ವವೂ ಮೂಲ ಸೌಲಭ್ಯಗಳಿಲ್ಲ. ಕುಡಿಯುವ ನೀರು ಕಲುಷಿತವಾಗಿದ್ದರಿಂದ ಗ್ರಾಮದ ಶೇ.85ರಷ್ಟು ಮಂದಿಗೆ ಜ್ವರ ಮತ್ತಿತರ ಕಾಯಿಲೆಗಳು ಬರುವುದು ಸಾಮಾನ್ಯವಾಗಿದೆ. ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಇಲ್ಲ. ಆಸ್ಪತ್ರೆಗೆ ಹೋಗಲು ಬಸ್ಗಳು ಇಲ್ಲ. ಗ್ರಾಪಂ ಸದಸ್ಯ ಸ್ವಾಮಿ ನನ್ನ ಸಹೋದರನೇ. ಕುಟುಂಬದಲ್ಲಿ ಆದ ಘಟನೆಯಿಂದ ತೀವ್ರ ಬೇಸತ್ತು ಆತ ಊರನ್ನು ಬಿಟ್ಟು ಹೋಗಿದ್ದಾರೆ. ಶಾಸಕರು ಕೂಡಲೇ ಗಮನಹರಿಸಬೇಕಾಗಿದೆ.
ಗ್ರಾಮದ ಸಮಸ್ಯೆಗಳ ಪಟ್ಟಿ
ಟಿ ರಸ್ತೆ ಇಲ್ಲ, ಶೌಚಾಲಯ ಇಲ್ಲ, ಚರಂಡಿ, ಸರಿಯಾದ ನೀರಿನ ಸೌಲಭ್ಯ ಇಲ್ಲ.
ಟಿ ಗ್ರಾಮಸಭೆ ನಡೆದಿಲ್ಲ, ಅಧಿಕಾರಿಗಳು ಭೇಟಿ ನೀಡಿಲ್ಲ.
ಟಿ ಗ್ರಾಮದಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಲಾಗಿದೆ. ಕೆರೆ ಒತ್ತುವರಿಯನ್ನೂ ಮಾಡಲಾಗಿದೆ. ದನಕರುಗಳಿಗೆ ನೀರಿನ ತೊಂದರೆಯಾಗಿದೆ.
ಟಿ ಬಸ್ ಸೌಲಭ್ಯ ಇಲ್ಲ, ಸಮುದಾಯ ಭವನ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತು 6 ವರ್ಷಗಳಾಗಿವೆ.
ಟಿ ಸರ್ಕಾರಿ ಸೌಲಭ್ಯಗಳಿಂದ ಸಂಪೂರ್ಣ ವಂಚಿತವಾಗಿದೆ.
ಟಿ ಬಹಳ ಹಿಂದೆ ಡೆಂಘೀ ಜ್ವರದಿಂದ ಬಂದಿತ್ತು.
ಟಿ ಶಾಲೆಯ ಕಟ್ಟಡ ಶಿಥಿಲಾವಸ್ಥೆ ತಲುಪಿದೆ.