ಗರುಡನಗಿರಿಯಲ್ಲಿ ಎನ್ನೆಸ್ಸೆಸ್ ಶಿಬಿರ
ಕಣಕಟ್ಟೆ (ಅರಸೀಕೆರೆ): ಗಾಂಧೀಜಿ ಸ್ವರಾಜ್ಯದ ಕನಸು ಕಂಡಿದ್ದರು. ಯುವ ಶಕ್ತಿಯ ಕನಸು ವಿವೇಕಾನಂದರದ್ದಾಗಿತ್ತು. ಆತ್ಮ ವಿಶ್ವಾಸ, ಸೇವಾ ಮನೋಭಾವನೆ, ಸಮಯ ಪ್ರಜ್ಞೆ ರಾಷ್ಟೀಯ ಭಾವೈಕ್ಯತೆ ಮುಂತಾದ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳಸಬೇಕಾಗಿದೆ ಎಂದು ವಿದ್ಯಾರಣ್ಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಎ.ಶಶಿಕುಮಾರ್ ಹೇಳಿದರು.
ಗರುಡನಗಿರಿ ಗ್ರಾಮದ ಬನಶಂಕರಿ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪಂಚನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ತೀರ್ಥಲಿಂಗಪ್ಪ ಮಾತನಾಡಿ, ಈ ಯೋಜನೆಯಿಂದ ವಿದ್ಯಾರ್ಥಿಗಳು ಪ್ರಯೋಜನ ಪಡೆದು ತತ್ವ ಸಿದ್ದಾಂತಗಳ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಬೇಕೆಂದು ಕರೆ ನೀಡಿದರು. ವಿದ್ಯಾರಣ್ಯ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಕೆ.ಎ.ನಾಗೇಶರಾವ್ ಮಾತನಾಡಿ, ರಾಷ್ಟೀಯ ಸೇವಾ ಯೋಜನೆ ಗುರಿ ಸಾಧಿಸುವ ದಿಸೆಯಲ್ಲಿ ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕೆಂದರು.
ನಿವೃತ್ತ ಆರ್.ಐ.ಶಂಕರಪ್ಪ ಮಾತನಾಡಿ, ಗರುಡನಗಿರಿ ಗ್ರಾಮಸ್ಥರು ಈ ಶಿಬಿರದ ಉಪಯೋಗ ಪಡೆದುಕೊಂಡು ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದರು. ಗ್ರಾಮ ಪಂಚಾಯ್ತಿ ಸದಸ್ಯ ಲೋಕೇಶ್ ವಿಶೇಷ ಶಿಬಿರ ಉದ್ಘಾಟಿಸಿದರು. ಶ್ಯಾನೆಗೆರೆ ಗ್ರಾಪಂ ಮಾಜಿ ಅಧ್ಯಕ್ಷ ದಾಸಶೆಟ್ಟಿ, ಗ್ರಾಪಂ ಸದಸ್ಯೆ ಮಂಜುಳ ಮರಿದಾಸಪ್ಪ, ಮುಖ್ಯೋಪಾಧ್ಯಾಯ ಬಸವರಾಜು, ಸಾಕ್ಷರತಾ ಸಮಿತಿ ಸಂಯೋಜಕ ಪರಮೇಶ್ ಇದ್ದರು. ಗರುಡನಗಿರಿ ಗ್ರಾಮಸ್ಥರು ಇದ್ದರು