ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗಾಂಧಿ ಜಯಂತಿಯಂದು ಮದ್ಯಪಾನ ಮುಕ್ತರಿಗೆ ಸನ್ಮಾನ

Rashmi Kasaragodu
Updated On : 5 Oct 2013, 12:10 pm

ಕನ್ನಡಪ್ರಭ ವಾರ್ತೆ, ಹಾಸನ, ಅ.4
ಹಾಸನಾಂಬ ಲಯನ್ಸ್, ಲಯನೆಸ್ ಕ್ಲಬ್ನಿಂದ ನಗರದ ಬೂವನಹಳ್ಳಿ ಕ್ರಾಸ್ ಬಳಿ ಇರುವ ಭುವನೇಶ್ವರಿ ಮದ್ಯಪಾನ ವ್ಯಸನ ಮುಕ್ತಿಕೇಂದ್ರದಲ್ಲಿ ಗಾಂಧಿಜಯಂತಿ ಅಂಗವಾಗಿ ಮದ್ಯಪಾನದಿಂದ ಮುಕ್ತರಾದವರನ್ನು ಸನ್ಮಾನಿಸಲಾಯಿತು.  
ಕಾರ್ಯಕ್ರಮ ಉದ್ಘಾಟಿಸಿದ ಹಾಸನ ಹಿಮ್ಸ್ ವೈದ್ಯಕೀಯ ಸಂಸ್ಥೆಯ ಮನೋವೈದ್ಯೆ ಡಾ.ಭಾರತಿ ಮಾತನಾಡಿ, ಮದ್ಯ ವ್ಯಸನ ಒಂದು ಮಾನಸಿಕ ಕಾಯಿಲೆಯಾಗಿ ಖಿನ್ನತೆ, ಆತಂಕ, ಬೇಜಾರು, ಒತ್ತಡ ಇತ್ಯಾದಿ ಕಾರಣಗಳ ನೆಪದಲ್ಲಿ ಕುಡಿಯುವುದು ಸಾಮಾನ್ಯವಾಗಿದೆ. ಕುಡಿತ ಸಾಮಾಜಿಕ ಪಿಡುಗಾಗಿ ಕಾಡುತ್ತಿದೆ. ಕುಡಿತದ ಚಟದಿಂದ ಹೊರಬರಲು ಮಾನಸಿಕ ಸ್ಥೈರ್ಯ, ದೃಢ ಸಂಕಲ್ಪ ಅಗತ್ಯ ಎಂದು ತಿಳಿಸಿ ಕುಡಿತ ಬಿಡುವ ವಿಚಾರದಲ್ಲಿ ಸೂಕ್ತ ಸಲಹೆ ಮಾರ್ಗದರ್ಶನ ನೀಡಿದರು.
ಹಾಸನಾಂಬ ಲಯನ್ಸ್ ಅಧ್ಯಕ್ಷ ಕೆ.ವಿ.ರವೀಂದ್ರಕುಮಾರ್ ಮಾತನಾಡಿ, ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಮದ್ಯಪಾನ ನಮ್ಮ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿ ಮದ್ಯವ್ಯಸನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಅವರ ಬದುಕು ನರಕ ಸದೃಶವಾಗುತ್ತಿರುವುದು ಕಳವಳಕರ ಸಂಗತಿ ಎಂದು ಹೇಳಿದರು.
ಈ ಸಾಮಾಜಿಕ ಪಿಡುಗನ್ನು ನಿಯಂತ್ರಿಸಲು ಜಾಗೃತಿ ಕಾರ್ಯಕ್ರಮಗಳು ಸಂಘ ಸಂಸ್ಥೆಗಳ ಸಹಕಾರದಲ್ಲಿ ಹೆಚ್ಚು ಹೆಚ್ಚಾಗಿ ನಡೆಯಬೇಕಾಗಿದೆ. ಈ ದಿಶೆಯಲ್ಲಿ  ಲಯನ್ಸ್ನಿಂದ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ರೂಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಅಹಿಂಸಾ ಮಾರ್ಗದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿ ಮಾರ್ಗ ಮತ್ತು ತತ್ವಗಳು ಕೇವಲ ಹೆಸರಿಗೆ ಮಾತ್ರವಾಗಿ ಆಚರಣೆಯಲ್ಲಿ ಜಾರಿಗೆ ಬಾರದೆ ಹಾಗೇ ಉಳಿದಿವೆ. ಹಳ್ಳಿ ಪಟ್ಟಣಗಳಲ್ಲಿ ಕುಡಿತದ ಚಟಕ್ಕೆ ಬಲಿಯಾಗಿ ಅನೇಕ ಸಂಸಾರಗಳು ಬೀದಿಪಾಲಾಗುತ್ತಿವೆ. ಕುಡಿತದ ವ್ಯಸನಿಗಳು ಜೀವಿತಾವಧಿಯ ಮಧ್ಯಾಂತರದಲ್ಲಿ ಸಾವಿಗೆ ತುತ್ತಾಗುತ್ತಿದ್ದು ಎಷ್ಟೋ ಕುಟುಂಬಗಳು ಸಂಕಷ್ಟಕ್ಕೆ ತುತ್ತಾಗುತ್ತಿವೆ ಎಂದು ನುಡಿದರು.
ಈ ದಿಸೆಯಲ್ಲಿ ಲಯನ್ಸ್ ಹಾಗೂ ಮದ್ಯಪಾನ ಮುಕ್ತಿ ಕೇಂದ್ರದ ಇಂತಹ ಕಾರ್ಯಕ್ರಮ ಪ್ರಯೋಜನಕಾರಿಯಾಗಿದೆ. ಇಂದು ಮದ್ಯಪಾನ ಚಟದಿಂದ ಮುಕ್ತಿ ಹೊಂದಿದವರನ್ನು ಸನ್ಮಾನಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಮದ್ಯಪಾನ ಮುಕ್ತಿ ಹೊಂದಿದವರ ಸಂಖ್ಯೆ ಇನ್ನೂ ಹೆಚ್ಚಲಿ. ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸಾಮಾಜಿಕ ಸೇವೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಹಾರೈಸಿದರು.
ಕಾರ್ಯದರ್ಶಿ ಯು.ಜೆ.ಮಲ್ಲಿಕಾರ್ಜುನ ಮಾತನಾಡಿ, ನಮ್ಮ ನಿತ್ಯ ಜೀವನದಲ್ಲಿ ಗಾಂಧಿ ನೀತಿಯನ್ನು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಬದುಕು ರೂಪಿಸಿಕೊಳ್ಳಬೇಕಾದುದು ಅತ್ಯಗತ್ಯವಾಗಿದೆ ಎಂದರು.
ಗಾಂಧೀಜಿಯವರ ಮದ್ಯಪಾನ ವಿರೋಧಿ ಆಂದೋಲನದ ಕನಸನ್ನು ನೆನಸು ಮಾಡಲು  ಮುಕ್ತಿಕೇಂದ್ರವು ತಮ್ಮದೇ ಆದ ಮಾರ್ಗದಲ್ಲಿ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಭುವನೇಶ್ವರಿ ಮದ್ಯಪಾನ ವ್ಯಸನ ಮುಕ್ತಿ ಕೇಂದ್ರದ ನಿರ್ದೇಶಕಿ ಅಂಜಲಿದೇವಿ ಮಾತನಾಡಿ.  ಆಸ್ಪತ್ರೆಯಲ್ಲಿ ಈವರೆಗೆ 1500 ಮಂದಿ ಮದ್ಯವ್ಯಸನಿಗಳು ಚಿಕಿತ್ಸೆ ಪಡೆದು ಮದ್ಯವ್ಯಸನದಿಂದ ಮುಕ್ತರಾಗಿದ್ದಾರೆ. ಈ ಆಸ್ಪತ್ರೆಯ ದಾರಿದೀಪವಾಗಿ ಲಯನ್ಸ್ ನಮ್ಮ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಗಾಂಧೀಜಿಯವರ ಆಶಯದಂತೆ ಕೆಲವು ವ್ಯಕ್ತಿಗಳನ್ನಾದರೂ ಮದ್ಯವ್ಯಸನದಿಂದ ದೂರ ಮಾಡಿ ಆ ಕುಟುಂಬಗಳ ಹಿತ ಕಾಪಾಡಿದ ತೃಪ್ತಿ ನಮಗಿದೆ ಎಂದು ಹೇಳಿದರು.
ಲಯನ್ಸ್ ಸಂಸ್ಥೆ ಅಧ್ಯಕ್ಷೆ ನಾಗರತ್ನ ವೇದಿಕೆಯಲ್ಲಿದ್ದರು. ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು. ಪಾರ್ವತಿ ಪ್ರಾರ್ಥಿಸಿದರು. ಜಯಣ್ಣ ಸ್ವಾಗತಿಸಿದರು. ಕುಡಿತದ ವ್ಯಸನದಿಂದ ಮುಕ್ತರಾದ ಪಾಂಡುರಂಗಪ್ಪ, ಧನರಾಜ್, ರಾಘವೇಂದ್ರ ಹಾಗೂ ಜಯಮ್ಮ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement