ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಡಿವೈಎಸ್ಪಿ ಚಂದ್ರಪ್ಪ ಅಂತ್ಯಕ್ರಿಯೆ

Rashmi Kasaragodu
Updated On : 4 Oct 2013, 11:58 am

ಹಾಸನ: ನರಹಂತಕ ವೀರಪ್ಪನ್ ನಡೆಸಿದ ಗುಂಡಿನ ದಾಳಿಯಲ್ಲಿ ಹೋರಾಟ ನಡೆಸಿ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದು, ಬುಧವಾರ ನಿಧನರಾದ ಡಿವೈಎಸ್ಪಿ ಎಂ.ಎನ್. ಚಂದ್ರಪ್ಪ ಅವರ ಹುಟ್ಟೂರಾದ ಚನ್ನರಾಯಪಟ್ಟಣ ತಾಲೂಕು ಮಾತನಹಳ್ಳಿಯ ಸಮೀಪದ ನವಿಲೆ ಗೇಟ್ ಬಳಿ ಇರುವ ಜಮೀನಿನಲ್ಲಿ ಗುರುವಾರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಡಿವೈಎಸ್ಪಿ ರಾಷ್ಟ್ರಪತಿ ಚಿನ್ನದ ಪದಕಕ್ಕೆ ಭಾಜನರಾಗಿದ್ದ ಮೃತರ ಅಂತ್ಯಕ್ರಿಯೆ ಸಂದರ್ಭದಲ್ಲಿ ಪತ್ನಿ ವನಜಾಕ್ಷಮ್ಮ, ಇಬ್ಬರು ಪುತ್ರಿಯರು, ಇಬ್ಬರು ಪುತ್ರರು, ಚನ್ನರಾಯಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ಶೈಲೇಂದ್ರ ಕುಮಾರ್, ನುಗ್ಗೇಹಳ್ಳಿ ಠಾಣಾಧಿಕಾರಿ ಕೆ. ಜಗದೀಶ್ ಮತ್ತು ಅಪಾರ ಸಂಖ್ಯೆಯಲ್ಲಿ ಗ್ರಾಮೀಣ ಭಾಗದ ಜನರು ಇದ್ದರು. ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿವೈಎಸ್ಪಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಚಂದ್ರಪ್ಪ ಅವರ ತಲೆಗೆ ವೀರಪ್ಪನ್ ಹಾರಿಸಿದ ಗುಂಡನ್ನು ತೆಗೆದಿರಲಿಲ್ಲ. ಅದು ಮೆದುಳಿನ ಮೇಲೆ ದುಷ್ಪರಿಣಾಮ ಬೀರಿದ್ದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿತ್ತು. ಆದು ಫಲಕಾರಿಯಾಗದೇ ಬುಧವಾರ ಮೃತಪಟ್ಟರು. 1990 ಏಪ್ರಿಲ್ 9ರಂದು ಚಂದ್ರಪ್ಪನವರು, ತಮ್ಮ ಸಿಬ್ಬಂದಿಯೊಂದಿಗೆ ತೆರಳಿದ್ದಾಗ ನರಹಂತಕ ವೀರಪ್ಪನ್ ಮತ್ತು ಆತನ ಸಹಚರರು ಗುಂಡಿನ ಮಳೆ ಗೈದಿದ್ದರು. ಆಗ ದೇಹಕ್ಕೆ ಆನೇಕ ಗುಂಡುಗಳು ಹೊಕ್ಕರೂ ಆಶ್ಟರ್ಯಕರ ರೀತಿಯಲ್ಲಿ ಪಾರಾಗಿದ್ದರು. ಈ ದಾಳಿಯಲ್ಲಿ ಸಬ್ ಇನ್ಸ್ಪೆಕ್ಟರ್ರಾದ ಶಕೀಲ್ ಅಹಮದ್, ಜಗನ್ನಾಥ್, ದಿನೇಶ್ ರಾಮಲಿಂಗು ಮತ್ತು ಶಂಕರರಾವ್ ಮೃತಪಟ್ಟಿದ್ದರು. ಮೈಸೂರು ನಗರದಲ್ಲಿ ವಿಪರೀತವಾಗಿದ್ದ ಗುಂಡಾಗಳ ಹಾವಳಿಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಂದ್ರಪ್ಪ ಅವರು ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದರು.
ಗ್ರಾಮ ನಂಟಿಗೆ ಅಂಟಿಕೊಂಡಿದ್ದರು: ಪೊಲೀಸ್ ಇಲಾಖೆಯಿಂದ ನಿವೃತ್ತರಾಗಲು 2 ವರ್ಷಗಳು ಇದ್ದ ಚಂದ್ರ ಅವರು, ನಗರ ಪ್ರದೇಶಗಳಲ್ಲಿ ಹೆಚ್ಚು ಸೇವೆ ಸಲ್ಲಿಸಿದರೂ ತಮ್ಮ ಹುಟ್ಟೂರಿನ ನಂಟನ್ನು ಕಳೆದುಕೊಂಡಿರಲಿಲ್ಲ. ಆಗಾಗ್ಗೆ ಗ್ರಾಮಕ್ಕೆ ಬಂದು ಹಳೆ ಸ್ನೇಹಿತರೊಂದಿಗೆ ಇದ್ದು ಹೋಗುತ್ತಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement