ತ್ರಿವರ್ಣ ಧ್ವಜಕ್ಕೆ ಅಪಮಾನ ಖಂಡಿಸಿ ಪ್ರತಿಭಟನೆ
ಚನ್ನರಾಯಪಟ್ಟಣ: ಕನ್ನಡದ ಚಿತ್ರ ನಿರ್ದೇಶಕನೊಬ್ಬ ಭಾರತ ಮಾತೆ ಹಾಗೂ ತ್ರಿವರ್ಣ ಧ್ವಜಕ್ಕೆ ಅವಮಾನಿಸಿದ ಚಿತ್ರಣವನ್ನು ಚಿತ್ರಿಸಿ ಅಂತರ್ಜಾಲದಲ್ಲಿ ಪ್ರಸರಿಸಿರುವುದನ್ನು ಖಂಡಿಸಿ ತಾಲೂಕು ಕನ್ನಡ ಕಾವಲು ಪಡೆ ಕಾರ್ಯಕರ್ತರು ಪ್ರತಿಭಟಿಸಿ ನಿರ್ದೇಶಕನ ಪ್ರತಿಕೃತಿ ದಹಿಸಿದರು.
ಅಂತರ್ಜಾಲದ ಯುಟ್ಯೂಬ್ನಲ್ಲಿ ನಿರ್ದೇಶಕ ಅವರಾಂ ತ್ರಿವರ್ಣ ಧ್ವಜ ಹಾಗೂ ಭಾರತ ಮಾತೆಯನ್ನು ಕೀಳುಮಟ್ಟದಲ್ಲಿ ಅವಮಾನಿಸಿ ಚಿತ್ರೀಕರಣ ಮಾಡಿ ಅಂತರ್ಜಾಲದಲ್ಲಿ ಪ್ರಸರಿಸಿರುವುದನ್ನು ಖಂಡಿಸಿ ದೇಶ ದ್ರೋಹದ ಕೆಲಸ ಮಾಡುತ್ತಿರುವ ಆತನನ್ನು ಬಂಧಿಸುವಂತೆ ಆಗ್ರಹಿಸಿ ತಾಲೂಕು ಅಧ್ಯಕ್ಷ ನವೀನ್ಕುಮಾರ್ ಅಧ್ಯಕ್ಷತೆಯಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ಕನ್ನಡ ಕಾವಲು ಪಡೆಯ ಕಾರ್ಯಕರ್ತರು ಹೊಸ ಬಸ್ ನಿಲ್ದಾಣದ ಬಳಿಯಿಂದ ನಿರ್ದೇಶಕನ ವಿರುದ್ಧ ಘೋಷಣೆಗಳನ್ನು ಕೂಗಿ ಆತನನ್ನು ಪೊಲೀಸ್ ಇಲಾಖೆ ಬಂಧಿಸಲು ವಿಫಲತೆಯನ್ನು ಖಂಡಿಸಿ ಕೆ.ಆರ್. ಸರ್ಕಲ್ನಲ್ಲಿ ಪ್ರತಿಕೃತಿ ದಹಿಸಿದರು. ಈ ಸಂದರ್ಭದಲ್ಲಿ ನವೀನ್ಕುಮಾರ್ ಮಾತನಾಡಿ, ದೇಶದ ವಿರುದ್ಧ ಯಾರೇ ಏನೇ ಮಾಡಿದರೂ ತಾವು ಹೋರಾಟಕ್ಕಾಗಿ ನಿಂತಿದ್ದೇವೆ. ತ್ರಿವರ್ಣ ಧ್ವಜ, ವಂದೆ ಮಾತರಂ ಹಾಗೂ ರಾಷ್ಟ್ರಗೀತೆಯನ್ನು ಬದಲಾಯಿಸಿ ಅದಕ್ಕೆ ಅವಮಾನಪಡಿಸಿರುವ ಆತನನ್ನು ಬಂಧಿಸಿ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ನಗರ ಘಟಕದ ಅಧ್ಯಕ್ಷ ಮಧು, ಉಪಾಧ್ಯಕ್ಷ ಮಹೇಶ್, ತಾಲೂಕು ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಕುಮಾರ್ ಇದ್ದರು.