ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚಳ: ನ್ಯಾ. ಮುಸ್ತಫ ಹುಸೇನ್
ಹಾಸನ: ಮಕ್ಕಳ ಹಕ್ಕುಗಳು ಮತ್ತು ಸಂರಕ್ಷಣೆ ಕುರಿತು ತಾಲೂಕಿನ ಪೂಮಗಾಮೆ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸರ್ಕಾರಿ ಕಾನೂನು ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲೆ, ಪೂಮಗಾಮೆಗಳ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಸಿಜೆಎಂ ಹಾಗೂ ಸದಸ್ಯ ಕಾರ್ಯದರ್ಶಿ ಮುಸ್ತಫ ಹುಸೇನ್ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯಗಳು ವಿಪರೀತ ಹೆಚ್ಚಾಗುತ್ತಿದ್ದು, ಅದು 2 ವಿಭಾಗವಾಗಿ ಹೊರಹೊಮ್ಮುತ್ತಿದೆ. ಒಂದು ಕಡೆ ಸಾರ್ವಜನಿಕರಿಂದ ಲೈಂಗಿಕ ದೌರ್ಜನ್ಯಗಳಾದರೆ, ಮತ್ತೊಂದು ಕಡೆ ತನ್ನ ಕುಟುಂಬದವರಿನದಲೇ ಲೈಂಗಿಕ ದೌರ್ಜನ್ಯಗಳಾಗುತ್ತಿರುವುದು ವಿಷಾದನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ಬಿ. ಜಯಂತ್ಕುಮಾರ್ ಮಾತನಾಡಿದರು. ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲ ಮಡಿವಾಳಪ್ಪ ಮಾಟೊಳ್ಳಿ ಮಾತನಾಡಿದರು.
ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಈ ರೀತಿಯ ಅರಿವು ಕಾರ್ಯಕ್ರಮಗಳು ಹೆಚ್ಚು ಹಳ್ಳಿಗಳಲ್ಲಿ ನಡೆಯುವಂತಾಗಬೇಕು ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಎಂ.ಆರ್. ಶಶಿಧರ್ ವಹಿಸಿದ್ದರು.
ಕಾನೂನು ಅರಿವು ಕಾರ್ಯಕ್ರಮದ ಉದ್ಘಾಟನೆಯ ನಂತರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಧಿವೇಶನಗಳು ನಡೆದವು. ಮೊದಲನೇ ಅಧಿವೇಶನದಲ್ಲಿ ಭಾಷೆಯ ಕುರಿತಾಗಿ, ಸರ್ಕಾರಿ ಕಾನೂನು ಕಾಲೇಜಿನ ಉಪನ್ಯಾಸಕಿ ವಿನುತ ಅವರು ಇಂಗ್ಲಿಷ್ ಭಾಷೆ ಮತ್ತು ನಾವು ಇಂಗ್ಲಿಷ್ ಭಾಷೆಯನ್ನು ಕಲಿಯುವ ಕುರಿತಾಗಿ ಉಪನ್ಯಾಸವನ್ನು ನೀಡಿದರು. ಮತ್ತೊಂದು ಅಧಿವೇಶನದಲ್ಲಿ ಸರ್ಕಾರಿ ಕಾನೂನು ಕಾಲೇಜು ಅಂತಿಮ ವರ್ಷದ ವಿದ್ಯಾರ್ಥಿಗಳಾದ ಎಚ್.ಎನ್. ಷಾದ್ ಹಾಗೂ ಎ.ಎಂ. ಕಲಾ ಅವರು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕಿನ ಕಾಯಿದೆ- 2009 ಮತ್ತು ಬಾಲಾಪರಾಧಿ ನ್ಯಾಯ ಕಾನೂನುಗಳ ಕುರಿತಾಗಿ ಉಪನ್ಯಾಸಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಅಂತಿಮ ವರ್ಷದ ಎಲ್ಲಾ ಕಾನೂನು ವಿದ್ಯಾರ್ಥಿಗಳು ಬಾಗವಹಿಸಿದ್ದರು. ಕಾರ್ಯಕ್ರವನ್ನು ಶಿಕ್ಷಕ ಜಿ.ರು. ಮಲ್ಲಿಕಾರ್ಜುನ್ ನಿರೂಪಿಸಿದರು. ಶಿಕ್ಷಕ ದಿನೇಶ್ ಸ್ವಾಗತಿಸಿದರು. ಬಸವಲಿಂಗಪ್ಪ ವಂದಿಸಿದರು.