'ವಸತಿ' ಅನರ್ಹರ ಆಯ್ಕೆ; ಆರೋಪ
ಹೊಳೆನರಸೀಪುರ: ಇಲ್ಲಿನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಯ ಸಂದರ್ಭದಲ್ಲಿ ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಇಲ್ಲಿನ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಿಡಿಒಗಳು ಅರ್ಹರನ್ನು ಆಯ್ಕೆ ಮಾಡಿ ಯೋಜನೆಯನ್ನು ದುರುಪಯೋಗ ಮಾಡಿದ್ದಾರೆ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಲಕ್ಕೂರು ಬಸವರಾಜು ಹಾಗೂ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಇಲ್ಲಿನ ಕಾಂಗ್ರೆಸ್ ಮುಖಂಡರಾದ ಪುರಸಭೆ ಸದಸ್ಯ ರಾಘವೇಂದ್ರ, ತಾಲೂಕು ಬ್ಲಾಕ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ವಳಂಬಿಗೆ ನಾರಾಯಣ್, ತಾಲೂಕು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ವೆಂಕಟೇಶ್, ಆರ್. ರಂಗಸ್ವಾಮಿ ಮೊದಲಾದವರು ವಸತಿ ಯೋಜನೆಯಲ್ಲಿ ಇಲ್ಲಿನ ತಾಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಿಡಿಒಗಳು ನಡೆಸಿದ್ದಾರೆ. 2010-11ನೇ ಸಾಲಿನಿಂದ 2013ನೇ ಸಾಲಿನವರೆಗಿನ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳು, ವಸತಿ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಲೋಕಾಯುಕ್ತರು, ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ರಾಜೀವ್ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಶಾಸಕರು ಏಜೆಂಟರಂತೆ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ತಾಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಿಡಿಒಗಳು ತಮ್ಮ ಹಿಂಬಾಲಕರನ್ನು ನಿಲ್ಲಿಸಿ ಫೋಟೋ ತೆಗೆದು ಕಡತಗಳನ್ನು ಸೃಷ್ಟಿಸಿ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಾಗಿ ಆರೋಪಿಸಿದ್ದಾರೆ.
ವಸ್ತು ಪ್ರದರ್ಶನ
ಚನ್ನರಾಯಪಟ್ಟಣ: ಅ.3ರಂದು ಪಟ್ಟಣದಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಮೇಗಲಕೇರಿ ಶಾಲೆ ವಿಜ್ಞಾನ ಮತ್ತು ಗಣಿತ ಆವಿಷ್ಕಾರದಲ್ಲಿ ಪ್ರಥಮ ಬಹುಮಾನ ಪಡೆದ ಬಾಗೂರು ಶಾಲೆ ದ್ವಿತೀಯ ಸ್ಥಾನ ಪಡೆದಿದೆ. ಆರೋಗ್ಯ ಮತ್ತು ಆಹಾರ ವಿಭಾಗದಲ್ಲಿ ದಿಡಗ ಶಾಲೆ ಪ್ರಥಮ ಸ್ಥಾನ ಪಡೆದರೆ ಬೆಳಗೀಹಳ್ಳಿ ಶಾಲೆ ದ್ವಿತೀಯ ಸ್ಥಾನ ಪಡೆದಿದೆ. ನೈಸರ್ಗಿಕ ಸಂಪನ್ಮೂಲ ವಿಭಾಗದಲ್ಲಿ ಪೂರ್ಣಚಂದ್ರ ಪಬ್ಲಿಕ್ ಶಾಲೆ ಪ್ರಥಮ ಹಾಗೂ ಪಡುವನಹಳ್ಳಿ ಸರ್ಕಾರಿ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆದಿದೆ. ಪರಿಸರ ವಿಭಾಗದಲ್ಲಿ ಉದಯಪುರ ಪ್ರಥಮ, ಬಾಲಕಿಯರ ಪ್ರೌಢಶಾಲೆ ದ್ವಿತೀಯ, ಕೃಷಿ ವಿಭಾಗದಲ್ಲಿ ಚನ್ನರಾಯಪಟ್ಟಣ ಮೇಗಲಕೇರಿ ಶಾಲೆ ಪ್ರಥಮ, ದಮ್ಮನಿಂಗಲ ಶಾಲೆ ದ್ವಿತೀಯ ಸ್ಥಾನ ಪಡೆದಿದೆ. ಶಕ್ತಿ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಕೆ. ಬೈರಾಪುರ ಪ್ರಥಮ ಹಾಗೂ ನವೋದಯ ವಿದ್ಯಾಸಂಸ್ಥೆ ದ್ವಿತೀಯ ಸ್ಥಾನ ಪಡೆದಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ಬಹುಮಾನ ನೀಡಿ ಗೌರವಿಸಿದರು.