ಶೇ.36ರಷ್ಟು ಪೊಲೀಸರಲ್ಲಿ ಮಾನಸಿಕ ಖಿನ್ನತೆ'
ಸಕಲೇಶಪುರ: ಅತಿಯಾದ ಕೆಲಸದೊತ್ತಡದಿಂದ ಪೊಲೀಸರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆಂದು ಇನ್ಸ್ಪೆಕ್ಟರ್ ದಿನೇಶ್ ಪಾಟೀಲ್ ವಿಷಾದಿಸಿದ್ದಾರೆ.
ಇತ್ತೀಚೆಗೆ ಗಾಂಧಿ ಜಯಂತಿ ಅಂಗವಾಗಿ ಲಯನ್ ಹಾಗೂ ಲಯನ್ಸ್ ಸಂಸ್ಥೆ ಪೊಲೀಸ್ ಸಿಬ್ಬಂದಿಗಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಸುಧಾಕರ್ ಮಾತನಾಡಿ, ಕರ್ತವ್ಯದ ಒತ್ತಡದಿಂದಾಗಿ ಅತಿ ಹೆಚ್ಚು ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವವರ ಸಾಲಿನಲ್ಲಿ ವೈದ್ಯರು ಹಾಗೂ ಪೊಲೀಸರು ಇದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಶೇ.36ರಷ್ಟು ಪೊಲೀಸ್ ಸಿಬ್ಬಂದಿ ಮಾನಸಿಕ ಖಿನ್ನತೆ ಅಥವಾ ಇನ್ನಿತರ ರೋಗಗಳಿಂದ ಬಳಲುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಹಾಗೂ ಗ್ರಾಮಾಂತರ ಠಾಣೆಯ ಪೊಲೀಸ್ ಪೇದೆಗಳು ಉಚಿತ ಆರೋಗ್ಯ ತಪಾಸಣಾ ಶಿಬಿರದ ಉಪಯೋಗ ಪಡೆದುಕೊಂಡರು.
ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷ ಅರಕೆರೆ ನರೇಶ್, ಕಾರ್ಯದರ್ಶಿ ಸಂಜೀತ್ ಶೆಟ್ಟಿ, ಖಜಾಂಚಿ ಜಯಶಂಕರ್, ಗ್ರಾಮಾಂತರ ಠಾಣೆ ಪಿಎಸ್ಐ ಭರತ್ಗೌಡ, ಪಟ್ಟಣ ಠಾಣೆ ಪಿಎಸ್ಐ ಜೀವನ್, ಲಯನ್ಸ್ ಅಧ್ಯಕ್ಷೆ ಮೇಘ ನರೇಶ್ ಇದ್ದರು.