ಷರತ್ತು ರದ್ದುಪಡಿಸಲು ಆಗ್ರಹ
ಹಾಸನ: ರಾಜ್ಯ ಅಲ್ಪಸಂಖ್ಯಾತರ ನಿಗಮದ ಸಾಲ ಯೋಜನೆಯಲ್ಲಿ ಹೊಸದಾಗಿ ವಿಧಿಸಲಾಗಿರುವ ಷರತ್ತುಗಳನ್ನು ರದ್ದು ಪಡಿಸುವಂತೆ ಜಿಲ್ಲಾ ಅಲ್ಪ ಸಂಖ್ಯಾತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮುಬ್ಬಷೀರ್ ಅಹಮ್ಮದ್ ಆಗ್ರಹಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸ್ ಅಲ್ಪ ಸಂಖ್ಯಾತ ನಿಗಮದ ಸಾಲ ಯೋಜನೆ ಪ್ರಾರಂಭಿಸಿದರು. ಒಂದು ಸಮಯದಲ್ಲಿ ಬಡ ಜನರ ಜೀವನಕ್ಕೆ ಆಸರೆಯಾಗಿದ್ದ ಯೋಜನೆ ಕಾಲಕ್ರಮೇಣ ಗಾಳಿಗೆ ತೂರಿ ಇಂದಿನ ರಾಜಕಾರಣಿಗಳ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಅನ್ಯಾಯ ಮಾಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಈ ನಿಗಮವು ಸಹಾಯಧನ, ಸಬ್ಸಿಡಿ ಸೇರಿದಂತೆ ಇತರೆ ವ್ಯವಹಾರಗಳು ಬ್ಯಾಂಕ್ಗಳ ಅನುಮೋದನೆಯನ್ವಯ ವ್ಯವಹರಿಸುತ್ತಿದೆ. ಬಡವರು ಬ್ಯಾಂಕಿಗೆ ಹೋದರೆ ಜಾಣತನದ ಮಾತುಗಳಿಂದ ವಾಪಸ್ ಕಳುಹಿಸುತ್ತಿದ್ದಾರೆ. ಹಿಂದಿನ ಸರ್ಕಾರಗಳು ಸಾಲ ನೀಡುತ್ತಿದ್ದರೂ ಇಂದಿನ ಹೊಸ ಆದೇಶದಂತೆ ಸಾಲ ಪಡೆಯಲು ಕಷ್ಟಕರವಾಗಿದೆ ಎಂದು ಹೇಳಿದರು.
ಅಲ್ಪ ಸಂಖ್ಯಾತರ ಅಭಿವೃದ್ಧಿಯನ್ನು ಬಯಸುವ ಸರ್ಕಾರ ಈ ಷರತ್ತುಗಳನ್ನು ಸಡಿಲಗೊಳಿಸಿ ಮತ್ತು ಬಡವರಿಗೆ ಹಾಗೂ ನಿರುದ್ಯೋಗಿಗಳಿಗೆ ಸಾಲದ ಯೋಜನೆ ತಲುಪಬೇಕು. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಕ್ರೈಸ್ತರಿಗೆ ಮಾತ್ರ ನೀಡುವ ಗೃಹಸಾಲ, ಬಡ್ಡಿ ಸಹಾಯಧನ ಯೋಜನೆಯನ್ನು ಇನ್ನಿತರೆ ವರ್ಗಗಳಿಗೂ ನೀಡಿ 1 ಲಕ್ಷ ರು.ನಿಂದ 5 ಲಕ್ಷ ರು.ವರೆಗೂ ಸಾಲ ವಿಸ್ತರಿಸುವಂತೆ ಒತ್ತಾಯಿಸಿದರು.
ಸರ್ಕಾರಿ ಸಾಲಗಳು ಅಭ್ಯರ್ಥಿಗಳಿಗೆ ಬ್ಯಾಂಕಿನ ಮೂಲಕ ಯಾವುದೇ ವಿತರಕರ ಹೆಸರಿನಲ್ಲಿ ಮಂಜೂರಾತಿಯಾದ ಚೆಕ್ ನೀಡದೆ ನೇರವಾಗಿ ಮಂಜೂರಾಗಲಿ ಎಂದು ಆಗ್ರಹಿಸಿದರು. ಸಂಚಾಲಕ ಸಮೀರ್ ಅಹಮದ್ ಇದ್ದರು.