8ಕ್ಕೆ ಸಿಎಂ ಆಗಮನ, ಜನತಾದರ್ಶನ, ಕೆಡಿಪಿ ಸಭೆಯಲ್ಲಿ ಭಾಗಿ
ಕನ್ನಡಪ್ರಭ ವಾರ್ತೆ ಹಾಸನ ಅ. 5
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ನಂತರ ಪ್ರಥಮ ಬಾರಿಗೆ ಜಿಲ್ಲೆಗೆ ಅ.8ರಂದು ಆಗಮಿಸುತ್ತಿದ್ದು, ಜನತಾ ದರ್ಶನ ಸೇರಿದಂತೆ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅ.8ರಂದು ಬೆಳಗ್ಗೆ 11ಕ್ಕೆ ಹಾಸನಕ್ಕೆ ಆಗಮಿಸಲಿದ್ದು, ಹಾಸನಾಂಬ ಕಲಾ ಕ್ಷೇತ್ರದಲ್ಲಿ ಜನತಾ ದರ್ಶನ ನಡೆಸುವರು. ಮಧ್ಯಾಹ್ನ 12.30ರಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಭೆ, ನಂತರ 3 ರಿಂದ ಜಿಲ್ಲಾ ಪಂಚಾಯ್ತಿಯಲ್ಲಿ ಅಧಿಕಾರಿಗಳೊಂದಿಗೆ ಕೆಡಿಪಿ ಸಭೆ ನಡೆಸಲಿದ್ದಾರೆ ಎಂದರು.
ಜಿಲ್ಲೆಯ ಜನರು ತಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಮುಂದೆ ನಿವೇದಿಸಿಕೊಳ್ಳಬೇಕು. ಜಿಲ್ಲೆಯಲ್ಲಿನ ಸಮಸ್ಯೆಗಳು ಹಾಗೂ ಹಿಂದಿನ ಸರ್ಕಾರಗಳು ಬಳುವಳಿಯಾಗಿ ನೀಡಿರುವಂತಹ ಸಮಸ್ಯೆಗಳು, ಕಾಡಾನೆ, ತೆಂಗು, ಪ್ಲೋರೈಡ್ಯುಕ್ತ ಕುಡಿಯುವ ನೀರು, ರೇಲ್ವೆ ಮೇಲ್ಸೆತುವೆ, ರಿಂಗ್ ರಸ್ತೆ, ನೀರಾವರಿ ಯೋಜನೆಗಳು ಸೇರಿದಂತೆ ಇತರೆ ಸಮಸ್ಯೆಗಳನ್ನು ಮುಖ್ಯಮಂತ್ರಿಗಳು ಆಲಿಸಲಿದ್ದಾರೆ. ಜನರ ಸಮಸ್ಯೆ ಆಲಿಸಿದ ನಂತರ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಿದ್ದಾರೆ ಎಂದು ಹೇಳಿದರು. ಸಿದ್ದರಾಮಯ್ಯರೊಂದಿಗೆ ಈಗಾಗಲೇ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆಯನ್ನು ನಡೆಸಲಾಗಿದ್ದು, ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಭ್ರಷ್ಟಾಚಾರ ಮುಕ್ತ- ಸರ್ಕಾರದ ಉದ್ದೇಶ: ಜಿಲ್ಲೆಯಲ್ಲಿ ನಡೆಯುತ್ತಿದ್ದಂತಹ ಮರಳು ಹಾಗೂ ಕಲ್ಲು ದಂಧೆ ನಡೆಯುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಇದರಿಂದ ಜಿಲ್ಲಾಡಳಿತ ಸ್ವಲ್ಪ ಬಿಗಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಈ ದಂಧೆ ನಡೆಸುತ್ತಿದ್ದವರಿಗೆ ಶಾಕ್ ನೀಡಿದಂತಾಗಿದೆ ಎಂದ ಅವರು, ಜಿಲ್ಲಾಡಳಿತದವತಿಯಿಂದ ಅಕ್ರಮ ಮರಳು ಮತ್ತು ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಲಾರಿ ಮತ್ತು ಟ್ರ್ಯಾಕ್ಟರ್ ವಶಪಡಿಸಿಕೊಂಡಾಗ ಜೆಡಿಎಸ್ ಮುಖಂಡ ಅದನ್ನು ಬಿಡಿಸಲು ತಹಿಸೀಲ್ದಾರ್ ಕಚೇರಿಗೆ ಕುದ್ದಾಗಿ ಭೇಟಿ ನೀಡಿ ಒತ್ತಡ ಹೇರುತ್ತಾರೆ. ಈ ಬಗ್ಗೆ ತಹಸೀಲ್ದಾರ್ ಕೂಡ ಜೆಡಿಎಸ್ ನಾಯಕರು ಕಚೇರಿಗೆ ಬಂದಿದ್ದರು ಎಂದು ಹೇಳಿಕೆ ನೀಡಿದ್ದಾರೆ. ನಿಷ್ಟೆಯಿಂದ ಕೆಲಸ ಮಾಡಲು ಮುಂದಾದರೆ ಅಂತಹವರಿಗೆ ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂದು ದೂರಿದ ಅವರು, ಭ್ರಷ್ಟಾಚಾರ ನಿರ್ಮೂಲನೆಯೇ ಸರ್ಕಾರದ ಉದ್ದೇಶವಾಗಿದೆ. ತಹಸೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರಗಳನ್ನು ತಡೆಯದಿದ್ದರೆ ಬಡವರಿಗೆ ಅನ್ಯಾಯವಾಗಲಿದೆ ಎಂದು ಹೇಳಿದರು.
ದುದ್ದ ರಸ್ತೆ ಕಾಮಗಾರಿ: ದುದ್ದ ರಸ್ತೆಗೆ ಸಂಬಂಧಿಸಿದಂತೆ ವಾರದೊಳಗೆ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ ಕಾಮಗಾರಿ ಪ್ರಾರಂಭವಾಗಲಿದೆ. ಇಲ್ಲವಾದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೇ ಮುತುವರ್ಜಿವಹಿಸಿ ಈ ರಸ್ತೆ ಕಾಮಗಾರಿ ಪೂರ್ಣಗೊಳಿಸಲಿದ್ದಾರೆ ಎಂದರು.
ಅಧಿಕಾರಿಗಳ ವರ್ಗಾವಣೆ ಆಗಿಲ್ಲ: ಜಿಲ್ಲೆಯಲ್ಲಿ ಜೆಡಿಎಸ್ ಪರವಾಗಿರುವಂತಹ ಕೆಲ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ ಅನ್ನೋದು ಸುಳ್ಳು, ನಾವು ಯಾವುದೇ ಅಧಿಕಾರಿಯನ್ನು ವರ್ಗಾಹಿಸುವಂತೆ ಕೇಳಿಲ್ಲ. ನರೇಗ ಯೋಜನೆಯಡಿ ಭ್ರಷ್ಟಚಾರ ಎಸಗಿದ್ದಂತಹ ಪಿಡಿಓ ಅಧಿಕಾರಿಯನ್ನು ಬೇರೆಡೆಗೆ ವರ್ಗಾಹಿಸಲಾಗಿದೆ ಅಷ್ಟೇ. ಬೇರೆ ಯಾವುದೇ ಇಲಾಖೆಯ ಅಧಿಕಾರಿಗಳನ್ನು ವರ್ಗಾಹಿಸಿಲ್ಲ ಎಂದು ಸ್ವಷ್ಟಪಡಿಸಿದರು. ಡಿ.ಮಲ್ಲೇಶ್, ಎಚ್.ಕೆ.ಮಹೇಶ್, ಸಿ.ಎಸ್.ಪುಟ್ಟೇಗೌಡ, ಎಚ್.ಕೆ.ಜವರೇಗೌಡ ಹಾಗೂ ಇತರರು ಇದ್ದರು.