ಆರೋಗ್ಯ ಸಮಸ್ಯೆ ಕುರಿತು ಅರಿವು ಕಾರ್ಯಕ್ರಮ
ಹಾಸನ: ನಗರದ ಪುಷ್ಕರಣಿ ಐಟಿಐ ಕಾಲೇಜಿನಲ್ಲಿ ರೋಟರಿ ಮಿಡ್ಟೌನ್ ಸಹಯೋಗದೊಂದಿಗೆ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಹದಿಹರೆಯದಲ್ಲಿನ ಆರೋಗ್ಯ ಸಮಸ್ಯೆಗಳ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಿಶೋರಾವಸ್ಥೆಯಲ್ಲಿ ಉಂಟಾಗುವ ಪೌಷ್ಠಿಕಾಂಶದ ಕೊರತೆ, ಮೊಡವೆಗಳು, ವ್ಯಾಯಾಮದ ಪ್ರಾಮುಖ್ಯತೆ, ಸಂಚಾರಿ ನಿಯಮ ಪಾಲಿಸುವುದು ಹಾಗೂ ದುಶ್ಚಟಗಳಿಂದ ದೂರವಿರುವ ಬಗ್ಗೆ ಸಚಿತ್ರವಾಗಿ ಮಕ್ಕಳ ತಜ್ಞ ಡಾ.ದಿನೇಶ್ ಕಬ್ಳಿಗೆರೆ ವಿವರಿಸಿದರು.
13 ರಿಂದ 19ರ ವಯೋವುತಿಯ ಯುವಕ ಯುವತಿಯರಲ್ಲಿ ಉಂಟಾಗುವ ದೈಹಿಕ ಮಾನಸಿಕ ಬದಲಾವಣೆಗಳ ವೈಜ್ಞಾನಿಕ ತಳಹದಿ, ಸಂತಾನೋತ್ಪತ್ತಿ ಅಂಗಗಳ ರಚನೆ ಮತ್ತು ಕಾರ್ಯ, ಲೈಂಗಿಕ ಕಿರುಕುಳ, ಲೈಂಗಿಕ ಕಾಯಿಲೆ ಇತ್ಯಾದಿ ಬಗ್ಗೆ ಮಕ್ಕಳ ವೈದ್ಯ ಡಾ. ಸುಧೀರ್ ಬೆಂಗಳೂರು ಸವಿಸ್ತಾರವಾಗಿ ಮಾಹಿತಿ ನೀಡಿದರು.
ರೋಟರಿ ಮಿಡ್ಟೌನ್ ಅಧ್ಯಕ್ಷ ಆರ್. ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸಿ, ರೋಟರಿ ಸಂಸ್ಥೆ ಯುವಜನ ಸೇವೆ ಶೀರ್ಷಿಕೆಯಡಿ ಯುವಕರ ಏಳ್ಗೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಆರೋಗ್ಯ ಅರಿವು ಕಾರ್ಯಕ್ರಮ ಇವುಗಳಲ್ಲೊಂದು ಎಂದು ತಿಳಿಸಿದರು. ಕಾರ್ಯದರ್ಶಿ ಎನ್. ವಿಶ್ವನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಮಹೇಶ್ ಹಾಗೂ ಪುಷರಣಿ ಐಟಿಐ ಸಿಬ್ಬಂದಿ ವರ್ಗದವರು ಇದ್ದರು.