ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ಕ್ರಾಸ್ ಯುವ ಘಟಕ ಉದ್ಘಾಟನೆ
ಹೊಳೆನರಸೀಪುರ: ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ಕ್ರಾಸ್ ಯುವ ಘಟಕದ ಉದ್ಘಾಟನೆ ಹಾಗೂ ರಕ್ತದಾನದ ಅರಿವಿನ ಕುರಿತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೆಡ್ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ಹೆಮ್ಮಿಗೆ ಮೋಹನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿನಿಯರು ರೆಡ್ಕ್ರಾಸ್
ಸದಸ್ಯರಾಗಲು ತಿಳಿಸಿ, ಸಂಸ್ಥೆಯ ಧ್ಯೇಯೋದ್ಧೇಶ ಹಾಗೂ ಸಾಮಾಜಿಕವಾಗಿ ಸಂಸ್ಥೆಯ ಕಾರ್ಯಚಟುವಟಿಕೆ ಕುರಿತಂತೆ ಮಾಹಿತಿ ನೀಡಿದರು. ಸಂಸ್ಥೆಯ ತಾಲೂಕು ಘಟಕ ಅಧ್ಯಕ್ಷ ಡಾ.ಕೆ.ಸಿ.ಮರಿಯಪ್ಪ ಮಾತನಾಡಿ, ರೆಡ್ಕ್ರಾಸ್ ಅಗತ್ಯತೆ ಹಾಗೂ ಕರ್ತವ್ಯಗಳನ್ನು ಕುರಿತು ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದರು. ಸಂಸ್ಥೆಯ ಹಾಸನ ಶಾಖೆಯ ಅನುಗನಾಳು ಕೃಷ್ಣಮೂರ್ತಿ ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾಗಿದ್ದು, ಅದರೊಂದಿಗೆ ನೇತ್ರದಾನ ಹಾಗೂ ದುರ್ಬಲರ ಸೇವೆಗಳ ಮೂಲಕ ಸಂಸ್ಥೆಯ ಉನ್ನತ ಧ್ಯೇಯೋದ್ಧೇಶ ಬಗ್ಗೆ ತಿಳಿಸಿದರು.
ಜಿಲ್ಲಾ ಸಂಚಾಲಕ ಅಮ್ಜದ್ಖಾನ್, ರೋಟರಿ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ ಯುವ ಘಟಕಕ್ಕೆ ಶುಭ ಕೋರಿದರು. ಕಾರ್ಯಕ್ರಮಾಧಿಕಾರಿ ಪ್ರೊ. ಜಿ.ಸುನೀತ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರೊ.ಎಚ್.ಎಸ್.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಮಮತ ನಿರೂಪಿಸಿ, ಪವಿತ್ರ ಸ್ವಾಗತಿಸಿದರು. ಜ್ಯೋತಿ ವಂದಿಸಿದರು.