ಪ್ರಮುಖ ರಸ್ತೆ ಗುಂಡಿಮಯ: ಸಂಚಾರಕ್ಕೆ ಹರಸಾಹಸ
ಕ.ಪ್ರ. ವಾರ್ತೆ ಹಾರನಹಳ್ಳಿ ಅ.5
ಹಾರನಹಳ್ಳಿಯಿಂದ ಬಿ ತಾಂಡ್ಯ, ನಾಗೇನಹಳ್ಳಿ, ಕಾಮಲಾಪುರ, ಹಳ್ಳಹಳ್ಳಿ, ಕಲ್ಯಾಡಿಗೆ ಹೋಗುವ ಪ್ರಮುಖ ರಸ್ತೆ ಸಂಪೂರ್ಣವಾಗಿ ಗುಂಡಿ ಗೊಟರುಮಯವಾಗಿದ್ದು, ಈ ರಸ್ತೆಗಳಲ್ಲಿ ಸಂಚಾರ ನಡೆಸಲು ಹರಸಾಹಸ ಮಾಡುವ ದುಸ್ಥಿತಿ ಎದುರಾಗಿದೆ.
ಪ್ರತಿದಿನ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡು ಆಸ್ಪತ್ರೆಗೆ ಸೇರುವ ಸ್ಥಿತಿ ನಿರ್ಮಾಣವಾಗಿದ್ದರೂ ಈ ರಸ್ತೆಯ ಅಭಿವೃದ್ಧಿಗೆ ಮುಂದಾಗಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆ ಕಲ್ಯಾಡಿ ಮೂಲಕ ಜಾವಗಲ್ ಹಾಗೂ ರಂಗಾಪುರ ಮಾರ್ಗವಾಗಿ ಹಾಸನಕ್ಕೆ ಹೋಗುವ ಪ್ರಮುಖ ರಸ್ತೆಯಾಗಿದೆ. ಅರಸೀಕೆರೆ ಮತ್ತು ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ರಸ್ತೆ ಸೇರಿದ್ದು ಲೋಕೋಪಯೋಗಿ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ.
ನಾಗೇನಹಳ್ಳಿ ಗ್ರಾಮದ ಸಿದ್ದಮಲ್ಲಪ್ಪ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬಂದಿದ್ದ ಶಾಸಕ ರುದ್ರೇಶಗೌಡ ರಸ್ತೆ ಅಭಿವೃದ್ಧಿ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಆಡಳಿತವಿದ್ದರೂ ಈ ರಸ್ತೆ ದುರಸ್ತಿಗೆ ಮುಂದಾಗಿಲ್ಲವೆಂದು ಕಿಡಿಕಾರಿದರು. ಇನ್ನಾದರೂ ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ರುದ್ರೇಶ್ಗೌಡ ಮುಂದಾಗಬೇಕೆಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.