ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಿತಿಮೀರಿದ ಚಿರತೆ ಹಾವಳಿ

Rashmi Kasaragodu
Updated On : 6 Oct 2013, 12:04 pm

ಕನ್ನಡಪ್ರಭ ವಾರ್ತೆ೤ ಹಾಸನ೤ ಅ. 5
ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ, ಅಂಗಮಾರಿ ಮುಂತಾದ ಸಮಸ್ಯೆಗಳ ನಡುವೆ ಮತ್ತೊಂದು ಎನ್ನುಂತೆ ಚಿರತೆಗಳ ಹಾವಳಿ ಮಿತಿ ಮೀರಿದ್ದು, ಜನನಿಬಿಡ ಪ್ರದೇಶಗಳಲ್ಲಿ ಬೆಳ್ಳಂಬೆಳಗ್ಗೆ ಚಿರತೆಗಳು ದಾಳಿ ನಡೆಸುತ್ತಿದ್ದು, ಜನರಲ್ಲಿ ಜೀವ ಭಯ ಹೆಚ್ಚಾಗಿದೆ.
ತಾಲೂಕಿನ ದೊಡ್ಡಕೊಂಡಗೊಳ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಎರಡು ಮರಿಗಳು ಸೇರಿದಂತೆ ನಾಲ್ಕು ಚಿರತೆಗಳು ಗ್ರಾಮದ ತೋಟಗಳಲ್ಲಿ ಬೀಡು ಬಿಟ್ಟಿದ್ದು, ಇದರ ಹಾವಳಿಯಿಂದಾಗಿ ಗ್ರಾಮದ ಜನತೆ ತೋಟಕ್ಕೆ ಹತ್ತಿರ ಹೋಗಲು ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ.
ಸುಮಾರು 500 ಮನೆಗಳಿರುವ ಈ ಗ್ರಾಮ ಹಾಸನ ನಗರದಿಂದ ಕೇವಲ ಏಳೆಂಟು ಕಿ.ಮೀ ನಷ್ಟು ದೂರದಲ್ಲಿದೆ. ಆಲೂ, ಜೋಳ, ಶುಂಠಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುವ ಈ ಗ್ರಾಮದಲ್ಲಿ ಚಿರತೆಗಳು ಅಡ್ಡಾಡುವ ಮೂಲಕ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸುತ್ತಿವೆ. ಕಳೆದ ಒಂದು ತಿಂಗಳಿನಿಂದ ಗ್ರಾಮಸ್ಥರ ಕಣ್ಣಿಗೆ ಮರಿಗಳ ಸಮೇತ ಕಾಣಿಸಿಕೊಳ್ಳುತ್ತಿರುವ ಚಿರತೆಗಳು ಎಲ್ಲಿ ಗ್ರಾಮದೊಳಗೆ ನುಗ್ಗಿ ದಾಂಧಲೆ ನಡೆಸುತ್ತವೋ ಅನ್ನೋ ತೀವ್ರ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಗ್ರಾಮದ ಮಂಜಣ್ಣ ಎಂಬುವರ ತೋಟದಲ್ಲಿ ಜೋಳದ ಫಸಲು ನಡುವೆ ಹಾಗೂ ಪಕ್ಕದಲ್ಲಿ  ಗಿಡಗಂಟೆಗಳು ಬೆಳೆದಿರುವ ಜಾಗದಲ್ಲಿ ಚಿರತೆಗಳು ವಾಸವಾಗಿವೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ತವರದೇವರಕೊಪ್ಪಲು ಗ್ರಾಮದ ರಂಗಸ್ವಾಮಿ ಎಂಬಾತ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಎರಡು ಚರಿತೆಗಳು ಮರದ ಮೇಲೆ ನಿಂತಿದ್ದವು ಹಾಗೂ ಮತ್ತೆರಡು ಚಿರತೆ ಮರಿಗಳು ಕೆಳಗೆ ಇದ್ದು, ಬೇಟೆಗಾಗಿ ಹೊಂಚು ಹಾಕುತ್ತಿದ್ದವು. ಮತ್ತೆ ಕೆಲವು ಗ್ರಾಮಸ್ಥರು ರಾತ್ರಿ ವೇಳೆಯಲ್ಲಿ ಬೈಕ್ನಲ್ಲಿ ಹೋಗುವ ಸಂದರ್ಭದಲ್ಲಿ ಚಿರತೆಗಳು ಕಾಣಿಸಿಕೊಂಡಿವೆ. ಹೀಗೆ ಚಿರತೆಗಳು ಪದೇ ಪದೇ ಕಾಣಿಸಿ ಕೊಳ್ಳುತ್ತಿರುವುದರಿಂದ ಹಗಲು ಸಮಯದಲ್ಲೇ ತೋಟಗಳಿಗೆ ಗ್ರಾಮಸ್ಥರು ಹೋಗದಂತಾಗಿದೆ.
ದೊಣ್ಣೆ ಮತ್ತು ಕುಡುಗೋಲುಗಳನ್ನು ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ನಾಲ್ಕು ಚಿರತೆಗಳು ಗ್ರಾಮದ ಸುತ್ತಮುತ್ತ ಅಡ್ಡಾಡುತ್ತಿರುವುದರಿಂದ ಯಾವ ಸಂದರ್ಭದಲ್ಲಿ ಚಿರತೆಗಳು ದಾಳಿ ಮಾಡುತ್ತವೋ ಅನ್ನೋ ಭಯ ಗ್ರಾಮಸ್ಥರನ್ನು ಕಾಡುತ್ತಿದೆ.
ಪುರದಮ್ಮ ಸೀಗೆ ಗುಡ್ಡದಿಂದ: ಈ ಹಿಂದೆ ಒಮ್ಮೆ ಚಿರತೆ ಈ ಗ್ರಾಮಕ್ಕೆ ಬಂದು ದಾಂಧಲೆ ಮಾಡಿತ್ತು. ಈಗ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಚಿರತೆಗಳು ಪುರದಮ್ಮ ಹಾಗೂ ಸೀಗೆ ಗುಡ್ಡದಿಂದ ಬಂದು ಇಲ್ಲಿ ಬೀಡು ಬಿಟ್ಟಿವೆ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿಮಾರ್ಣವಾಗಿದೆ.
ಬೋನ್ ವ್ಯವಸ್ಥೆಗೆ ಆಗ್ರಹ: ಚಿರತೆಗಳು ಗ್ರಾಮದಲ್ಲಿ ಕಾಣಿಸಿಕೊಂಡ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದು, ಕೂಡಲೇ ಚಿರತೆಗಳನ್ನು ಹಿಡಿಯುವಂತೆ ಮನವಿ ಮಾಡಲಾಗಿದೆ. ಆದರೆ ಇನ್ನೂ ಅರಣ್ಯ ಇಲಾಖೆಯವರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದ ಕಳೆದ 15 ದಿನಗಳಿಂದ ತೋಟದ ಕೆಲಸಗಳನ್ನು ಮಾಡಲು ನಮಗೆ ಸಾಧ್ಯವಾಗಿಲ್ಲ. ಜತೆಗೆ ಬೆಳೆಗಳು ನಾಶವಾಗುತ್ತಿವೆ. ಚಿರತೆಗಳ ಹಾವಳಿ ಹೆಚ್ಚಾಗಿರುವುದರಿಂದ ಜಾನುವಾರುಗಳನ್ನು ಇಲ್ಲಿ ಮೇಯಲು ಬಿಡುತ್ತಿಲ್ಲ. ಕೂಡಲೇ ಅರಣ್ಯ ಇಲಾಖೆಯವರು ಗ್ರಾಮದಲ್ಲಿ ಬೋನ್ ವ್ಯವಸ್ಥೆ ಕಲ್ಪಿಸಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement