ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವ
ಹಾಸನ: ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವ ಅಕ್ಷರಶ: ನೃತ್ಯಲೋಕವೊಂದನ್ನು ಭವ್ಯವಾಗಿ ಅನಾವರಣಗೊಳಿಸಿತು. ದೇಶ ವಿದೇಶಗಳ ನೂರಾರು ಕಲಾವಿದರು ತಂಡೋಪ ತಂಡವಾಗಿ ಒಂದೇ ವೇದಿಕೆಯಲ್ಲಿ ನಡೆಸಿಕೊಟ್ಟ ನಾನಾ ನಾಟ್ಯ ಪ್ರಕಾರಗಳು ನೆರೆದಿದ್ದವರ ಮನಸೂರೆ ಗೊಂಡು ಬೆರುಗು ಮೂಡಿಸಿತು. ಅದರಲ್ಲೂ ಮಣಿಪುರಿ ಸ್ಟಿಕ್ ಡ್ಯಾನ್ಸ್ ನಿಜಕ್ಕೂ ಮೈನವಿರೇಳಿಸಿತು.
ಮೂಡುಬಿದಿರೆಯ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ನ 67ನೇ ನಗರ ಘಟಕವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು. ಇದರ ಅಂಗವಾಗಿ ನಗರದ ಹಾಸನಾಂಬ ಕಲಾಭವನದಲ್ಲಿ ಆಯೋಜಿಸಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ, ಕಲಾರಸಿಕರು ಮತ್ತು ಸಾಂಸ್ಕೃತಿಕ ಆಸಕ್ತರ ಮನ ಗೆಲ್ಲುವಲ್ಲಿ ಭರ್ಜರಿ ಯಶಸ್ವಿಯಾಯಿತು.
ರಾಜ್ಯದ ನಾನಾ ತಂಡಗಳ ಜೊತೆಗೆ ಹೊರದೇಶಗಳ ಕಲಾವಿದರು ನಡೆಸಿಕೊಟ್ಟ ನೃತ್ಯಗಳಂತೂ ನೆರೆದವರನ್ನು ರೋಮಾಂಚನಗೊಳಿಸಿತು. ಯಂತ್ರದೋಪಾದಿಯಲ್ಲಿ ಬಾಗಿ ಬಳುಕಿದ ಕಲಾವಿದರ ಕಸರತ್ತು ಮೈ ಜುಮ್ಮೆನ್ನಿಸಿತು.
ದಕ್ಷಿಣ ಕರ್ನಾಟಕದ ಗಂಡು ಕಲೆ ಭರತನಾಟ್ಯ, ನವದುರ್ಗೆಯರ ಸಮೂಹ ನೃತ್ಯ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಮಹಾರಾಷ್ಟ್ರ ಲಾವಣಿ ನೃತ್ಯ, ಮಣಿಪುರಿಯ ದೋಲಚಲಂ ಕುಣಿತ ಒಂದಕ್ಕಿಂತ ಒಂದು ಚಂದ ಎನಿಸಿದವು.
ವಿಭಿನ್ನ ಕಲಾ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ನೋಡಿ ಸಂಭ್ರಮಿಸುವ ಅವಕಾಶ ಸಿಕ್ಕಿದ್ದಕ್ಕೆ ಕಲಾಪ್ರಿಯರು ಹಿರಿ ಹಿರಿ ಹಿಗ್ಗಿದರು. ಕನ್ನಡ ಮತ್ತು ಸಾಂಸ್ಕೃತಿಕ ಸಾಹಿತ್ಯಿಕ ಮನಸ್ಸುಗಳನ್ನು ಒಂದುಗೂಡಿಸುವುದು ಹಾಗೂ ನಾನಾ ದೇಶಗಳ ಸಾಂಸ್ಕೃತಿಕ ಸೊಗಡುಸಿರಿಯನ್ನು ನಮ್ಮವರಿಗೆ ಪರಿಚಯಿಸುವುದು ಈ ಸಾಂಸ್ಕೃತಿಕ ವೈಭವದ ಮುಖ್ಯ ಉದ್ದೇಶವಾಗಿತ್ತು. ಇದರ ಜೊತೆಗೆ ಇಂಥ ಕಾರ್ಯಕ್ರಮ ಆಯೋಜನೆ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡುವುದು ಮತ್ತೊಂದು ಪ್ರಮುಖ ಆಶಯವಾಗಿತ್ತು.
ಒಟ್ಟಾರೆ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಪಾಶ್ಚಾತ್ಯ ಸಂಗೀತದತ್ತ ಇಂದಿನ ಯುವಕರು ಮಾರು ಹೋಗುತ್ತಿದ್ದಾರೆ ಅನ್ನೋ ವಾದವನ್ನು ಸಾಂಸ್ಕೃತಿಕ ವೈಭವ ಸುಳ್ಳಾಗಿಸಿತು. ಏಕೆಂದರೆ ಸುಮಾರು 2 ತಾಸುಗಳ ಕಾಲ ನಡೆದ ಸಾಂಸ್ಕೃತಿಕ ವೈಭವಕ್ಕೆ ನಿರೀಕ್ಷೆಗೂ ಮೀರಿ ಜನ ಸೇರಿದ್ದರು.
ನಿಜಕ್ಕೂ ಬಗೆ ಬಗೆಯ ಅಭಿರುಚಿಯ ಹಾಡು ಕುಣಿತ ಕಂಡು ಪ್ರತಿಯೊಬ್ಬರೂ ಹರ್ಷಚಿತ್ತರಾದರು.