ಕೃಷಿ ಬ್ಯಾಂಕ್ ಅವ್ಯವಹಾರ: ಷೇರುದಾರರ ಪ್ರತಿಭಟನೆ
ಕ.ಪ್ರ. ವಾರ್ತೆ ಬೇಲೂರು ಅ.6
ಬಿಕ್ಕೋಡು ಕೃಷಿ ಪತ್ತಿನ ಸಹಕಾರ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರವನ್ನು ಉನ್ನತಮಟ್ಟದಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬ್ಯಾಂಕಿನ ಷೇರುದಾರರು ಮತ್ತು ಗ್ರಾಮಸ್ಥರು ಭಾನುವಾರ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸಿ ಅವ್ಯವಹಾರ ನಡೆಸಿರುವವರ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಕ್ಕೋಡು ಬಸವರಾಜು, ಬ್ಯಾಂಕಿಗೆ ಕೇಂದ್ರ ಸರಕಾರದಿಂದ 2007 ನೇ ಸಾಲಿನಲ್ಲಿ ಪ್ಯಾಕೇಜ್ರೂಪದಲ್ಲಿ ಹೆಚ್ಚಿನ ಹಣ ಬಂದಿದ್ದು ಅದನ್ನು ಅಂದಿನ ಕಾರ್ಯದರ್ಶಿ ಬಸವರಾಜು ಸೇರಿದಂತೆ 9 ಸದಸ್ಯರು ಹಣ ದುರುಪಯೋಗ ಪಡಿಸಿಕೊಂಡಿರುತ್ತಾರೆ.
ಇವರಿಗೆ ಸಾಲ ನೀಡುವಾಗ ಜಮೀನನ್ನು ಆಧಾರವಾಗಿ ಇಟ್ಟುಕೊಳ್ಳದೆ ಸಾಲ ನೀಡಲಾಗಿದೆ ಎಂದು ತಿಳಿಸಿದರು. 2008 ರಲ್ಲಿ ಭತ್ತದ ಬೆಳೆವಿಮೆ ಹಣದಲ್ಲಿ 1.29 ಲಕ್ಷ ರು. ದುರುಪಯೋಗವಾಗಿದೆ. ಶಿವಣ್ಣ, ರಾಜಶೇಖರ್ ಎಂಬುವರಿಗೆ ಆಡಳಿತ ಮಂಡಳಿ ಒಪ್ಪಿಗೆ ಇಲ್ಲದೆ 75 ಸಾವಿರ ರು. ಸಾಲ ನೀಡಲಾಗಿದೆ. ರಸಗೊಬ್ಬರ ಖರೀದಿಸುವ ಹಣವನ್ನು ಆಡಳಿತ ಮಂಡಳಿಯವರೆ ಬಳಸಿಕೊಂಡು ಅಕ್ರಮ ನಡೆಸಿದ್ದಾರೆ. ಕೆಲವು ಸದಸ್ಯರಿಗೆ ಒಂದೇ ಪಹಣಿಗೆ 3 ಬಾರಿ ಸಾಲ ನೀಡಿರುವುದು ಸಹ ನಡೆದಿದೆ ಎಂದು ಆರೋಪಿಸಿದರು.
ರೈತರಿಗೆ ಗೊಬ್ಬರ ವಿತರಣೆ ಸಮರ್ಪಕವಾಗಿಲ್ಲ. ಒಡವೆ ಅಡವಿಡಲು ಬಂದರೆ ಸಾಲ ಕೊಡುವುದಿಲ್ಲವೆಂದು ವಾಪಸ್ಸು ಕಳುಹಿಸುತ್ತಾರೆ. ಸರ್ವ ಸದಸ್ಯರ ಸಭೆ ನಡೆಸುವಲ್ಲಿಯೂ ಅಕ್ರಮ ನಡೆಸಲಾಗಿದೆ ಎಂದು ದೂರಿದರು.
ಈ ಎಲ್ಲಾ ಅಕ್ರಮ ಕುರಿತು ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ಬಿಕ್ಕೋಡು ಬಂದ್ ನಡೆಸಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಷೇರುದಾರ ಚಂದ್ರಶೇಖರ್ ಮಾತನಾಡಿದರು.