ಜಿಲ್ಲೆಯಲ್ಲಿ ಬಯಲೇ ಶೌಚಾಲಯ!
ಹಾಸನ: ಕೇಂದ್ರ ಅಥವಾ ರಾಜ್ಯ ಸರ್ಕಾರ ಏನೇ ಯೋಜನೆಗಳನ್ನು ಜಾರಿಗೆ ತಂದರೂ ಅವುಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವುದಿಲ್ಲ. ಕೇವಲ ಕಾಗದದಲ್ಲಿ ಮಾತ್ರ ಹಣ ವೆಚ್ಚವಾಗಿರುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗುತ್ತದೆ.
ಜಿಲ್ಲೆಯ ನಗರ ಮತ್ತು ಪಟ್ಟಣ ಕೇಂದ್ರಗಳ 1946 ಕುಟುಂಬಗಳಿಗೆ ಶೌಚಾಲಯಗಳೇ ಇಲ್ಲ. ಮತ್ತೊಂದು ಆಘಾತಕಾರಿ ಸಂಗತಿ ಎಂದರೆ 233 ಕುಟುಂಬಗಳಿಗೆ ತೆರೆದ ಚರಂಡಿಗಳೇ ಶೌಚಾಲಯಗಳಾಗಿವೆ. ಈ ಅಂಶ ಜಿಲ್ಲಾ ಯೋಜನೆ ಇಲಾಖೆ ಜಿಲ್ಲೆಯ ನಗರಸಭೆ, 5 ಪುರಸಭೆ ಮತ್ತು 2 ಪಟ್ಟಣ ಪಂಚಾಯ್ತಿಗಳಲ್ಲಿ ಸಮೀಕ್ಷೆ ನಡೆಸಿದಾಗ ಬೆಳಕಿಗೆ ಬಂದಿದೆ.
1946 ಕುಟುಂಬಗಳ ಪೈಕಿ ಪರಿಶಿಷ್ಟ ಜಾತಿಗೆ ಸೇರಿದ 70 ಕುಟುಂಬ, ಪರಿಶಿಷ್ಟ ವರ್ಗಕ್ಕೆ ಸೇರಿದ 33 ಮತ್ತು ಇತರೆ ವರ್ಗಗಳ 103 ಕುಟುಂಬಗಳಲ್ಲಿ ಶೌಚಾಲಯಗಳಿಲ್ಲ. ಇವರು ಆಶ್ರಯಿಸಿರುವುದು ಬಯಲನ್ನೇ.
ಆಲೂರು ತಾಲೂಕು ಕೆಂಚಮ್ಮನ ಹೊಸಕೋಟೆ ಬಳಿ ಶೌಚ ಸ್ವಚ್ಛಗೊಳಿಸುವಾಗ ಕಾರ್ಮಿಕನೊಬ್ಬ ಮೃತಪಟ್ಟ ಪ್ರಕರಣ ನಂತರ ಈ ಸಮೀಕ್ಷೆ ನಡೆಸಲಾಯಿತು. ಹಾಸನ ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ 302, ಅರಸೀಕೆರೆ ಪುರಸಭೆಯ 27 ವಾರ್ಡ್‌ಗಳ 146, ಚನ್ನರಾಯಪಟ್ಟಣ ಪುರಸಭೆಯ 23 ವಾರ್ಡ್‌ಗಳ 302 , ಹೊಳೆನರಸೀಪುರ ಪುರಸಭೆಯ 23 ವಾರ್ಡ್ ಗಳ 298, ಸಕಲೇಶಪುರ ಪುರಸಭೆಯ 23 ವಾರ್ಡ್‌ಗಳ 134, ಬೇಲೂರು ಪುರಸಭೆಯ 23 ವಾರ್ಡ್‌ಗಳ 313 ಕುಟುಂಬಗಳಿಗೆ ಶೌಚಾಲಯಗಳಿಲ್ಲ.
ಹಾಗೆಯೇ ಅರಕಲಗೂಡು ಪಟ್ಟಣ ಪಂಚಾಯ್ತಿಯ 12 ವಾರ್ಡ್‌ಗಳ 650 ಮತ್ತು ಆಲೂರು ಪಟ್ಟಣ ಪಂಚಾಯ್ತಿಯ 11 ವಾರ್ಡ್‌ಗಳ 103 ಕುಟುಂಬಗಳಿಗೆ ಶೌಚಾಲಯಗಳಿಲ್ಲ. ನಗರಸಭೆ, 5 ಪುರಸಭೆ ಮತ್ತು 2 ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 233 ಕುಟುಂಬಗಳಿಗೆ ಚರಂಡಿಗಳೇ ಶೌಚಾಲಯಗಳಾಗಿವೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಕುಟುಂಬಗಳಿದ್ದು, ಅದರಲ್ಲಿ ಶೇ. 10 ಕ್ಕೂ ಹೆಚ್ಚು ಮಂದಿ ಶೌಚಾಲಯ ಹೊಂದಿಲ್ಲ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೌಚಾಲಯ ನಿರ್ಮಾಣಕ್ಕಾಗಿ ನೀಡುವ ಕೋಟ್ಯಂತರ ರು. ವೆಚ್ಚವಾಗಿದೆ.
ಈ ನಡುವೆ ಜಿಲ್ಲಾ ಪಂಚಾಯ್ತಿ ಗ್ರಾಮೀಣ ಪ್ರದೇಶದಲ್ಲಿ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಬಡತನ ರೇಖೆಗಿಂತ ಕಡಿಮೆ ಇರುವ ಮಂದಿಗೆ ಉಚಿತವಾಗಿ ಶೌಚಾಲಯ ನಿರ್ಮಾಣ ಮಾಡಲು ಮುಂದಾಗಿದೆ.
ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಜಾರಿ ಆಗುತ್ತದೆಯೇ , ಶಿಕ್ಷಿತರು ಹೆಚ್ಚಿರುವ ಪಟ್ಟಣ ಪ್ರದೇಶಗಳಲ್ಲೇ ಈ ದುಸ್ಥಿತಿ ಇದ್ದರೇ ಗ್ರಾಮಾಂತರ ಪ್ರದೇಶದ ಸ್ಥಿತಿ ಕೇಳುವಂತೆಯೇ ಇಲ್ಲ ಎಂದು ನಾಗರಿಕ ವೇದಿಕೆ ಸಂಚಾಲಕ ಮಹೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಭ್ರಷ್ಟಾಚಾರವೇ ಕಾರಣ: ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುವ ಭ್ರಷ್ಟಾಚಾರದಿಂದ ಅಭಿವೃದ್ಧಿ ಕಾರ್ಯಕ್ರಮಗಳು ಅರ್ಹರಿಗೆ ತಲುಪುತ್ತಿಲ್ಲ. ಇದರಿಂದ ಬಡ ಕುಟುಂಬಗಳು ಶೌಚಾಲಯಗಳನ್ನು ಸರ್ಕಾರದ ಆರ್ಥಿಕ ನೆರವಿನಿಂದ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೂಡಾ ಟೀಕಿಸಲಾಗುತ್ತಿದೆ.
1993 ರಲ್ಲಿ ಮಲ ಹೊರುವ ಅನಿಷ್ಟ ಪದ್ಧತಿಯನ್ನು ತೊಡೆದು ಹಾಕಲು ಅಂದಿನ ಕೇಂದ್ರ ಸರ್ಕಾರ ದೇಶದ ಪ್ರತಿಯೊಂದು ಕುಟುಂಬಗಳು ಶೌಚಾಲಯ ಹೊಂದಬೇಕು. ಅದಕ್ಕಾಗಿ ರಾಜ್ಯ ಸರ್ಕಾರಗಳು ಗಂಭೀರ ಚಿಂತನೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿತ್ತಲ್ಲದೇ ಆನೇಕ ಯೋಜನೆಗಳಡಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಸಹಾಯಧನ ನೀಡಿತ್ತು.ಆದರೆ 20 ವರ್ಷಗಳಾದರೂ ನಗರ ಮತ್ತು ಪಟ್ಟಣ ಪ್ರದೇಶದ ಜನರು ಸರಿಯಾಗಿ ಶೌಚಾಲಯ ಹೊಂದಿಲ್ಲದೇ ಇರುವುದು ಅವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ.
ಅನಾರೋಗ್ಯ: ಬಯಲು ಮತ್ತು ತೆರದ ಚರಂಡಿಗಳನ್ನು ಶೌಚಾಲಯಗಳನ್ನಾಗಿ ಬಳಸು ಕೊಳ್ಳುವುದರಿಂದ ರೋಗರುಜಿನಗಳು ಹೆಚ್ಚಾಗುವುದು ಸಹಜ. ಕೂಡಲೇ ಸಂಬಂಧಪಟ್ಟ ಇಲಾಖೆಗಳು ಪ್ರತಿ ಕುಟುಂಬ ಶೌಚಾಲಯ ಹೊಂದುವಂತೆ ಮಾಡುವ ನಿಟ್ಟಿನಲ್ಲಿ ದಕ್ಷತೆ ಮತ್ತು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕಾಗಿದೆ. ಈ ಬಗ್ಗೆ ನಗರ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳು ಗಮನಹರಿಸಬೇಕಾಗಿದೆ.
ದಯಾಶಂಕರ ಮೈಲಿ