ತಾ.ಕಚೇರಿ ಅಂಗಳ ಸ್ವಚ್ಛಗೊಳಿಸಿದ ತಹಸೀಲ್ದಾರ್
ಚನ್ನರಾಯಪಟ್ಟಣ: ತಾವೊಬ್ಬ ತಹಸೀಲ್ದಾರ್ ಕಸ ತೆಗೆಯುವುದು ತಮ್ಮ ಕೆಲಸ ಅಲ್ಲ ಎಂದು ಭಾವಿಸದೆ ಕಂದಾಯ ಇಲಾಖೆಯ ಎಲ್ಲಾ ಡಿ. ಗ್ರೂಪ್ ಹಾಗೂ ಇತರ ನೌಕರರೊಂದಿಗೆ ಇಲ್ಲಿನ ತಹಸೀಲ್ದಾರ್ ನಾಗರಾಜು ಕೈ ಜೋಡಿಸಿ ಕಸ ತೆಗೆಯುವ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಎಲ್ಲರಲ್ಲಿಯೂ ಆಶ್ಚರ್ಯ ತಂದಿತು.
ಕಂದಾಯ ನೌಕರರಿಗೆ ಭಾನುವಾರ ರಜೆ ನೀಡದೆ ಅವರುಗಳಿಂದ ತಾಲೂಕು ಕಚೇರಿ ಆವರಣದಲ್ಲಿದ್ದ ಎಲ್ಲಾ ಗಲೀಜನ್ನು ಹೋಗಲಾಡಿಸುವ ಕಾರ್ಯ ತಹಸೀಲ್ದಾರ್ ನಾಗರಾಜು ನೇತೃತ್ವದಲ್ಲಿ ನಡೆಯಿತು.
ಸರ್ಕಾರಿ ಕಚೇರಿಗಳ ಆವರಣದಲ್ಲಿ ಸ್ವಚ್ಛತೆ ಮೊದಲು ಕಾಣಬೇಕು. ಆನಂತರದಲ್ಲಿ ನಾವು ಎಲ್ಲರಿಗೂ ಸ್ವಚ್ಛತೆ ಕಾಪಾಡಿಕೊಂಡು ಹೋಗಿ ಎಂದು ಹೇಳಬಹುದು ಎಂದು ನಾಗರಾಜು ಹೇಳಿದರು.
ಮಧ್ಯಾಹ್ನದ ಸುಡು ಬಿಸಿಲನ್ನೂ ಲೆಕ್ಕಿಸದೆ ನಾಗರಾಜು ಅವರು ಕಸ ತೆಗೆಯುವುದು, ಗುದ್ದಲಿ ಹಿಡಿದು ಕಳೆಯನ್ನು ತೆಗೆಯುವುದು ಸೇರಿದಂತೆ ತಾಲೂಕು ಕಚೇರಿ ಆವರಣದ ಸುತ್ತ ಗಿಡಗಳನ್ನು ನೆಡುವ ಮುಖೇನ ತಾಲೂಕಿನ ಎಲ್ಲಾ ಸರ್ಕಾರಿ ನೌಕರರಿಗೆ ಮಾದರಿಯಾದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗರಾಜು ಪ್ರತಿಕ್ರಿಯಿಸಿ ತಾವು ಕಾರ್ಯನಿರ್ವಹಿಸಿ ಪ್ರದೇಶ ಉತ್ತಮವಾಗಿದ್ದರೆ, ತಾವು ಬೇರೆಯವರಿಗೆ ತಿಳಿಸಲು ಅರ್ಹರಾಗುತ್ತೇವೆ. ತಾಲೂಕಿನ ಎಲ್ಲಾ ಆರು ತಾಲೂಕುಗಳಲ್ಲಿ ಪ್ರತಿ ಭಾನುವಾರ ತಮ್ಮ ನೌಕರರಿಂದ ಶ್ರಮದಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಥಮ ಹಂತದಲ್ಲಿ ತಮ್ಮ ಕಚೇರಿ ಸುತ್ತಮುತ್ತವಿರುವ ಪ್ರದೇಶವನ್ನು ಸ್ವಚ್ಛಗೊಳಿಸುವುದು. ಅದು ಮುಗಿದ ನಂತರದಲ್ಲಿ ಸರ್ಕಾರಿ ಗೋಮಾಳ ಹಾಗೂ ಸರ್ಕಾರಿ ಆಸ್ತಿಗಳನ್ನು ರಕ್ಷಿಸುವುದು ತಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ತಾಲೂಕಿನಲ್ಲಿ ಸರ್ಕಾರಿ ಭೂಮಿ, ಗೋಮಾಳ ಹಾಗೂ ಕೆರೆಗಳನ್ನು ಒತ್ತುವರಿ ಮಾಡಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅವುಗಳನ್ನು ತೆರವುಗೊಳಿಸಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದರು.
ತಾಲೂಕು ಕಚೇರಿಗೆ ಆಗಮಿಸುವವರಿಗೆ ಶೌಚಾಲಯ, ಕುಡಿಯುವ ನೀರು ವ್ಯವಸ್ಥೆಯನ್ನು ಸದ್ಯದಲ್ಲಿಯೇ ಕಲ್ಪಿಸಲಾಗುವುದು ಎಂದು ಹೇಳಿದರು.