ವಿದ್ಯಾರ್ಥಿಗಳಿಂದ ದೇಗುಲ ಆವರಣ ಸ್ವಚ್ಛತೆ
ಜಾವಗಲ್: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಶಿಬಿರಾರ್ಥಿಗಳು ಸಾಪ್ತಾಹಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇಗುಲದ ಆವರಣ ಸ್ವಚ್ಛಗೊಳಿಸಿದರು.
ದೇಗುಲದ ಆವರಣದೊಳಗೆ ಆಳೆತ್ತರಕ್ಕೆ ಬೆಳೆದು ನಿಂತಿದ್ದ ಪಾರ್ಥೇನಿಯಂ, ಸೀಮೆಸಿಗೆ, ಲಂಟಾನಾ ಮತ್ತಿತರ ಗಿಡಗಳನ್ನು ಸುಮಾರು 150 ಎನ್ಎಸ್ಎಸ್ ವಿದ್ಯಾರ್ಥಿಗಳು ಕಿತ್ತು ಸ್ವಚ್ಛಗೊಳಿಸಿದರು. ಪ್ರಾಂಶುಪಾಲ ವಸಂತರಾಜೇಅರಸ್, ಎನ್ಎಸ್ಎಸ್ ಅಧಿಕಾರಿ ಆರ್.ಎಸ್.ಶಿವಲಿಂಗಯ್ಯ, ಉಪನ್ಯಾಸಕ ಉದಯಕುಮಾರ್, ಮಂಜುನಾಥ್, ನಾಗರಾಜು, ಶ್ರೀನಿವಾಸ್ ಮೊದಲಾದವರು ಇದ್ದರು.
ಅಧಿಕಾರ ಸ್ವೀಕಾರ: ಜಾವಗಲ್ ಪೊಲೀಸ್ ಠಾಣಾಧಿಕಾರಿ ಜೆ.ಈ. ಮಹೇಶ್ ಅವರಿಗೆ ಹಾಸನಕ್ಕೆ ವರ್ಗವಾಗಿದ್ದು, ತೆರವಾದ ಅವರ ಸ್ಥಾನಕ್ಕೆ ಚಾಮರಾಜನಗರದಿಂದ ಸಿ.ಪಿ.ನವೀನ್ ಠಾಣಾಧಿಕಾರಿಯಾಗಿ ಬಂದಿದ್ದು, ಇತ್ತೀಚೆಗೆ ನೂತನ ಠಾಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.