'ವಿಶ್ವಕ್ಕೆ ಸತ್ಯ, ಅಹಿಂಸಾ ತತ್ವ ಪರಿಚಯಿಸಿದ ಮಹಾತ್ಮ ಗಾಂಧೀಜಿ'
ಹಾಸನ: ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಗಾಂಧೀಜಿಯವರ 144ನೇ ಜನ್ಮ ದಿನಾಚರಣೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ಜೆ.ಶೈಲಜಕುಮಾರಿ ಮಾತನಾಡಿ, ಗಾಂಧೀಜಿಯವರು ಕೇವಲ ಭಾರತ ಅಲ್ಲದೇ ಇಡೀ ವಿಶ್ವಕ್ಕೆ ಸತ್ಯ ಮತ್ತು ಅಹಿಂಸಾ ತತ್ವವನ್ನು ಪರಿಚಯಿಸಿದರು. ಸರಳ ಜೀವನ ನಡೆಸಿದ ಗಾಂಧೀಜಿ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸಿದ ಒಬ್ಬ ಸಾಮಾಜಿಕ ಚಿಂತಕರೂ ಆಗಿದ್ದರು
ಪ್ರೊ.ಎಚ್.ಡಿ.ನಿಂಗಯ್ಯ ಮಾತನಾಡಿ, ಗಾಂಧೀಜಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಅಹಿಂಸೆ ಎಂಬ ಅಸ್ತ್ರವನ್ನು ಹಿಡಿದು ದೇಶದ ಎಲ್ಲಾ ಜನಾಂಗಗಳನ್ನು ಸಂಘಟಿಸಿ ಶಾಂತಿಯುತ ಹೋರಾಟ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಯಶಸ್ವಿಯಾದರು ಎಂದು ಹೇಳಿದರು. ವಿಶ್ವದಲ್ಲೇ ಹೆಚ್ಚು ಮಾನ್ಯತೆ ಪಡೆದಿರುವ ವ್ಯಕ್ತಿಯಾದ ಗಾಂಧೀಜಿಯವರನ್ನು ವಿಶ್ವದ ಬಹುತೇಕ ರಾಷ್ಟ್ರಗಳು ಅವರ ಹೆಸರಿನಲ್ಲಿ ಅಂಚೆ ಚೀಟಿ ಹೊರತರುವ ಮೂಲಕ ಗೌರವ ಸಲ್ಲಿಸಿದೆ ಎಂದು ನುಡಿದರು.
ಪ್ರೊ. ನಿರ್ಮಲಾ, ಡಾ.ಕೆ.ಮೋಹನ್, ಡಾ.ಎಚ್.ಕೆ.ಕುಶಾಲಪ್ಪ ಇದ್ದರು. ಕು.ಶಾಹಿಸ್ತಾ ಸ್ವಾಗತಿಸಿದರು. ಪ್ರೊ. ಎಸ್.ಆರ್.ತಮ್ಮಯ್ಯ ವಂದಿಸಿದರು. ಬೋಧಕರು, ಬೋಧಕೇತರರು ಹಾಗೂ ವಿದ್ಯಾರ್ಥಿನಿಯರು ಇದ್ದರು.