ಶುಚಿ, ರುಚಿ ಆಹಾರ ಕಡೆಯೂ ಗಮನಹರಿಸಿ: ಪುಷ್ಪಗಿರಿ ಸ್ವಾಮೀಜಿ
ಕನ್ನಡಪ್ರಭ ವಾರ್ತೆ ಬೇಲೂರು ಅ. 6
ಇಂದಿನ ದಿನಗಳಲ್ಲಿ ಆಹಾರದಲ್ಲಿ ಶುಚಿತ್ವ ಹಾಗೂ ಸ್ವಚ್ಛತೆ ಇಲ್ಲದೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಜನರು ಶುಚಿ ಹಾಗೂ ರುಚಿ ಕಡೆ ಗಮನ ಹರಿಸಬೇಕು ಎಂದು ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಯಗಚಿ ಜಲಾಶಯ ಮುಂಭಾಗ ಫುಡ್ ಕ್ರಾಫ್ಟ್ ಇನ್ಸ್ಟಿಟ್ಯೂಟ್ನಲ್ಲಿ ಹೊಟೇಲ್ ಮ್ಯಾನೇಜ್ಮೆಂಟ್ ಅಲ್ಪಾವಧಿ ಉಚಿತ ತರಬೇತಿದಾರರಿಗೆ ಪ್ರಮಾಣ ಪತ್ರ ವಿತರಣೆ ಮಾಡಿದ ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನದಲ್ಲಿ ಹೋಟೆಲ್ ಉದ್ಯಮ ಫ್ಯಾಷನ್ ಆಗಿದ್ದು, ಆಹಾರ ತಯಾರಿಕೆಯಲ್ಲಿ ನುರಿತ ಹಾಗೂ ತರಬೇತಿ ಹೊಂದಿದ ಯುವಕ-ಯುವತಿಯರು ಅವಶ್ಯವಿದೆ ಎಂದು ಹೇಳಿದರು.
ಈ ಸಂಸ್ಥ ಪುಷ್ಪಗಿರಿಯಲ್ಲಿ ಸ್ಥಾಪನೆಯಾಗಬೇಕಿತ್ತು. ಆದರೆ ಕೆಲ ತಾಂತ್ರಿಕ ಕಾರಣದಿಂದ ಬೇಲೂರಿಗೆ ಸ್ಥಳಾಂತರವಾಗಿದೆ. ಗ್ರಾಮೀಣ ಪ್ರದೇಶದವರು ಎಂದಿಗೂ ಕೀಳರಿಮೆ ಮಾಡದೆ ಇಂತಹ ಸಂಸ್ಥೆಯಿಂದ ತರಬೇತಿ ಪಡೆದು ಉತ್ತಮ ಬದುಕು ಸಾಗಿಸಿ ಎಂದರು.
ಜಿಲ್ಲಾ ಪ್ರವಾಸೋದ್ಯಮ ಸಹಾಯಕ ನಿರ್ದೇಶಕ ಎಂ.ಪ್ರಕಾಶ್ ಮಾತನಾಡಿ, 10 ವರ್ಷದ ಹಿಂದೆ ಇಂತಹ ತರಬೇತಿ ಪಡೆಯಲು ದೆಹಲಿ, ಹರಿಯಾಣ ಹಾಗೂ ಬೆಂಗಳೂರಿಗೆ ತೆರಳಬೇಕಿತ್ತು ಆದರೆ ಇಂದು ಸರ್ಕಾರ ಗ್ರಾಮೀಣ ಪ್ರದೇಶ ಯುವಕ-ಯುವತಿಯರ ಸ್ಥಳೀಯವಾಗಿ ಸಂಸ್ಥೆ ತೆರೆದು ಉತ್ತಮ ಅವಕಾಶ ಮಾಡಿದೆ ಎಂದರು.
ಸಂಸ್ಥೆ ಆಹಾರ ತಯಾರಿಕೆ, ನಿರ್ವಹಣೆ ಸ್ವಚ್ಛತೆ ಹಾಗೂ ಶುಚಿತ್ವದ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಬೇಲೂರು ಮತ್ತು ಹಳೇಬೀಡು ವಿಶ್ವದಲ್ಲಿ ಖ್ಯಾತಿ ಪಡೆದರೂ ಕೂಡ ಇಲ್ಲಿ ಉತ್ತಮ ಹೊಟೇಲ್ ಇಲ್ಲ ಎಂದು ವಿಷಾದಿಸಿದರು. ಸಂಸ್ಥೆಯ ಪ್ರಾಂಶುಪಾಲ ಜಗದೀಶ್, ಧರ್ಮಣ್ಣ, ಶಾಂತಮೂರ್ತಿ, ರಾಮಚಂದ್ರ ಹೆಗಡೆ ಇತರರು ಇದ್ದರು.