ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶ್ರದ್ಧಾಭಕ್ತಿ, ಸಂಭ್ರಮದಿಂದ ಗಣೇಶ ವಿಸರ್ಜನೋತ್ಸವ

Mainashree
Updated On : 6 Oct 2013, 10:59 am

ಹೊಳೆನರಸೀಪುರ: ಪಟ್ಟಣದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲದಿಂದ ಶ್ರದ್ಧಾ ಭಕ್ತಿಯಿಂದ ಪ್ರತಿ ವರ್ಷವೂ ಆಚರಿಸಿಕೊಂಡು ಬರುತ್ತಿರುವ ಗಣೇಶೋತ್ಸವ ಭಾನುವಾರ ಮುಕ್ತಾಯವಾಯಿತು.
 ಮಹಾಗಣಪತಿಯನ್ನು ಅನಿರೀಕ್ಷಿತವಾಗಿ ಸುರಿಯುತ್ತಿದ್ದ ಮಳೆಯ ನಡುವೆ ಹೇಮಾವತಿ ನದಿಯಲ್ಲಿ ವಿಸರ್ಜಿಸುವ ಮೂಲಕ ಈ ಬಾರಿಯ ಗಣೇಶೋತ್ಸವಕ್ಕೆ ತೆರೆಬಿದ್ದಿತು.
 ಕಳೆದ 55 ವರ್ಷಗಳಿಂದ ಸಾರ್ವಜನಿಕ ಸಮಿತಿ ರೂಪಿತಗೊಂಡು ಎಲ್ಲ ಭಕ್ತ ಜನರ  ಸಹಕಾರ ಹಾಗೂ ಶ್ರಮದಾನದೊಂದಿಗೆ  ವಿದ್ಯುಕ್ತ ಹಾಗೂ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವ ಇಲ್ಲಿನ ಗಣೇಶೋತ್ಸವಕ್ಕೆ ಇದು 56ನೇ ವರ್ಷದ ಸಂಭ್ರಮದ ಆಚರಣೆ.
 ಪ್ರತಿ ವರ್ಷವೂ ವಿಶಾಲ ಹಾಗೂ ಭವ್ಯ ಪೆಂಡಾಲನ್ನು ನಿರ್ಮಿಸಿ ಮಹಾಗಣಪತಿಯನ್ನು ಪ್ರತಿಷ್ಠಾಪಿಸಿ ಹಲವು ದಿನಗಳ ಕಾಲ ಪಟ್ಟಣ ಹಾಗೂ ಸುತ್ತಮುತ್ತಲಿನ ಭಕ್ತಾಧಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಇಲ್ಲಿನ ಗಣೇಶೋತ್ಸವಕ್ಕೆ ತನ್ನದೇ ಆದ ಹಿನ್ನೆಲೆಯಿದೆ.
 ಸೆ.9ರಂದು ಇಲ್ಲಿನ ಮಹಾಗಣಪತಿ ಪೆಂಡಾಲಿನಲ್ಲಿ  ವಿದ್ಯುಕ್ತವಾಗಿ ಸ್ಥಾಪಿಸಲಾದ ಗಣಪತಿಗೆ ಪ್ರತಿನಿತ್ಯವೂ ಪೂಜಾ ಕಾರ್ಯಗಳು ನೆರವೇರಿದವು. ಮುಖ್ಯ ಆಕರ್ಷಣೆಯಾಗಿ ಪ್ರತಿ ದಿನ ರಾತ್ರಿ ನಾಡಿನ ಹೆಸರಾಂತ ಕಲಾವಿದರುಗಳಿಂದ ಹರಿಕಥೆ, ಸಂಗೀತ, ನೃತ್ಯ, ಹಾಸ್ಯ ಹಾಗೂ ವಾದ್ಯಗೋಷ್ಠಿ ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಯಿತು.
  ವೇದಿಕೆಯಲ್ಲಿ ನಾಡಿನ ಹೆಸರಾಂತ ಹರಿಕಥಾ ವಿದ್ವಾಂಸರಾದ ಗುರುರಾಜುಲು ನಾಯ್ಡ್, ಬಿ.ಪಿ.ರಾಜಮ್ಮ, ಭದ್ರಗಿರಿ ಕೇಶವದಾಸ್, ಭದ್ರಗಿರಿ ಅಚ್ಚ್ಯುತದಾಸ್  ಮೊದಲಾದವರಿಂದ ಕಥಾಕಾಲಕ್ಷೇಪ, ಡಾ. ವಿದ್ಯಾಭೂಷಣ  ಮೊದಲಾದವರಿಂದ ಭಕ್ತಿ ಗೀತಗಾನಮೃತ, ಪ್ರಭಾತ್ ಕಲಾವಿದರ ಸಂಗೀತ ನೃತ್ಯ ರೂಪಕಗಳು, ನಾಡಿನ ವಿವಿಧ ತಂಡಗಳ ನೃತ್ಯ ಪ್ರದರ್ಶನಗಳು, ಖ್ಯಾತ ಹಿನ್ನೆಲೆ ಗಾಯಕರುಗಳಿಂದ ಸಂಗೀತ ರಸಮಂಜರಿ, ಹಾಸ್ಯ ಕಲಾವಿದರ ಹಾಸ್ಯ-ಲಾಸ್ಯ ವಿಭಿನ್ನ ಕಾರ್ಯಕ್ರಮ ನಡೆಸುವ ಮೂಲಕ ಗಣೇಶೋತ್ಸವಕ್ಕೆದಿಂದ ವರ್ಷಕ್ಕೆ ವಿಭಿನ್ನ ಮೆರುಗನ್ನು ಇಲ್ಲಿನ ಮಹಾಗಣಪತಿ ಮಹೋತ್ಸವ ಸೇವಾ ಸಮಿತಿಯು ನೀಡುತ್ತಾ ಬಂದಿದೆ.
 ಈ ಬಾರಿಯ ಗಣೇಶೋತ್ಸವದಲ್ಲಿ 27 ದಿನ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಖ್ಯಾತ ಗುತ್ತಿಗೆದಾರ ಟಿ.ಶಿವಕುಮಾರ್ ಗೌರವಾಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆದ ಗಣೇಶೋತ್ಸವ ಪ್ರಯುಕ್ತ ಅ.5ರಂದು ಗಣಪತಿಯನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿದ್ಯುದ್ದೀಪಗಳಿಂದ ಅಲಂಕೃತವಾದ ಮಂಟಪದಲ್ಲಿ ಕುಳ್ಳಿರಿಸಿ ಪಟ್ಟಣದಲ್ಲಿ ಮೆರವಣಿಗೆಯನ್ನು ಮಾಡಲಾಯಿತು.
 ಈ ಸಂದರ್ಭದಲ್ಲಿ ಕೇರಳದ ರಾಷ್ಟ್ರ ಪ್ರಶಸ್ತಿ ವಿಜೇತ ತಂಡದಿಂದ ಚೆಂಡೆ ಮೇಳ, ಕಾಳಿ ಕುಣಿತ, ಡೊಳ್ಳು, ವೀರಭದ್ರ, ಪೂಜಾ ಕುಣಿತಗಳು, ಬೆಳ್ತಂಗಡಿಯ ಕಲಾವಿದರಿಂದ ಹಂಸ, ಕರಗ, ನವಿಲು ನೃತ್ಯ ಪ್ರದರ್ಶನಗಳಲ್ಲದೇ, ಗಾರುಡಿ ಗೊಂಬೆಗಳ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದ್ದು ಪಟ್ಟಣ ನಾಗರಿಕರ ತೀವ್ರ ಗಮನ ಸೆಳೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement