ಸುದ್ದಿ ಸಂಕ್ಷೇಪ
ನಗರಾಭಿವೃದ್ಧಿ ಸಂಸ್ಥೆಯಿಂದ ಸಂವಾದ ಕಾರ್ಯಕ್ರಮ
ಚನ್ನರಾಯಪಟ್ಟಣ: ಜಯಪ್ರಕಾಶ್ ನಾರಾಯಣ್ ಜನ್ಮದಿನದ ಅಂಗವಾಗಿ ಪಟ್ಟಣದ ಜಯಪ್ರಕಾಶ್ ನಾರಾಯಣ್ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯಿಂದ ಅ.11ರಂದು ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಂಸ್ಥೆ ಅಧ್ಯಕ್ಷ ಬಸವರಾಜು ತಿಳಿಸಿದರು. ಅಂದು ಬೆಳಿಗ್ಗೆ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಯುವ ಸಮೂಹ ಹಾಗೂ ಆರಕ್ಷಕ ಇಲಾಖೆಯ ಪಾತ್ರ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದರು.
ಜಿಲ್ಲಾ ಎಸ್ಪಿ ರವಿ ಚನ್ನಣ್ಣನವರ್ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಆದಿಚುಂಚನಗಿರಿ ಶಾಖಾ ಮಠ ಹಾಸನದ ಶಂಭುನಾಥ ಸ್ವಾಮೀಜಿ, ನ್ಯಾ. ಎಸ್.ಟಿ ದೇವರಾಜು, ತಹಸೀಲ್ದಾರ್ ನಾಗರಾಜು ಹಾಗೂ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಜಯರಾಮು ಭಾಗವಹಿಸಲಿದ್ದಾರೆ.
ಜಿಲ್ಲೆಯ ಎಲ್ಲಾ ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಯುವ ಜನತೆ ತಾವು ಯಾವ ಮಾರ್ಗಗಳನ್ನು ಹಿಡಿಯಬೇಕು ಎಂಬುದರ ಬಗ್ಗೆ ಹೆಚ್ಚು ಚರ್ಚೆಯಾಗಲಿದೆ ಎಂದು ತಿಳಿಸಿದರು. ಸಂಸ್ಥೆಯ ಮಹೇಶ್, ರತ್ಮಮ್ಮ ಹಾಗೂ ಶಿವಕುಮಾರ್ ಇದ್ದರು.
ವಿದ್ಯೆ ಸಾಧಕನ ಸ್ವತ್ತು: ಮಹೇಶ್ವರ ಶಿವಾಚಾರ್ಯ ಶ್ರೀ
ಹೊಳೆನರಸೀಪುರ: ವಿದ್ಯೆ ಸಾಧಕನ ಸ್ವತ್ತಾಗಿದ್ದು, ಶ್ರದ್ಧೆ, ಶಿಸ್ತು ಸಂಯಮ ತ್ರಿವೇಣಿ ಸಂಗಮವಾಗಿದೆ. ಪರಿಪೂರ್ಣ ಶಿಕ್ಷಣದ ನಿಜವಾದ ಅರ್ಥವೆಂದು ನುಗ್ಗೇಹಳ್ಳಿ ರಂಭಾಪುರಿ ಶಾಖಾ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಪ್ರಥಮದರ್ಜೆ ಕಾಲೇಜಿನ ಪರಂಪರಾ ಕೂಟ ಪಾರಂಪರಿಕಾ ಮೌಲ್ಯಗಳ ಅವಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸ್ಥಿರವಾಗಿ ನೆಲೆಸಲು ಶಿಕ್ಷಕ ಪ್ರಯತ್ನಿಸುತ್ತಾ ಬರುತ್ತಾನೆ, ಉತ್ತಮ ಸಂಸ್ಕಾರವನ್ನು ವಿದ್ಯಾರ್ಥಿ ರೂಢಿಸಿಕೊಳ್ಳುವುದರಿಂದ ಶಿಸ್ತು ಸಂಯಮ ವಿದ್ಯಾರ್ಥಿಗಳಲ್ಲಿ ನೆಲೆಸಲು ಸಾಧ್ಯವಾದಾಗ ಮಾತ್ರ ಆತ ಜ್ಞಾನಿಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಹರನಿಗಿಂತ ಗುರುವೇ ಶ್ರೇಷ್ಠ ಏಕೆಂದರೆ, ಹರನನ್ನು ಪರಿಚಯಿಸುವವನು ಗುರು. ಆದ್ದರಿಂದ ಗುರುವಿಗೆ ಬ್ರಹ್ಮನ ಸ್ಥಾನವನ್ನು ನಮ್ಮ ಗುರುಹಿರಿಯರು ನೀಡಿದ್ದಾರೆ. ಬರೀ ಪುಸ್ತಕದ ಶಿಕ್ಷಣ ನೀಡುವುದು ಮಾತ್ರವಲ್ಲ ವಿದ್ಯಾರ್ಥಿಗಳಲ್ಲಿ ನಮ್ಮ ಹಿರಿಯರ ಶಿಷ್ಟ ಸಂಪ್ರಾದಾಯ ಬಿತ್ತಿ ಬೆಳೆಸಬೇಕೆಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.
ಪ್ರಾಂಶುಪಾಲ ಪ್ರೊ. ಎಂ.ಬಿ.ಇರ್ಷಾದ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಸಿ.ಮಲ್ಲೇಶ್, ವಿಜಯಕುಮಾರ್, ರಾಮೇಗೌಡ ಹಾಗೂ ಎಂ.ಸಿ.ಕುಮಾರಸ್ವಾಮಿ ಇದ್ದರು.
ವ್ಯಕ್ತಿ ನಾಪತ್ತೆ
ಹಾಸನ: ಅರಕಲಗೂಡು ತಾ. ಯಲಗತವಳ್ಳಿಯ ಪಾರ್ಶ್ವನಾಥ (51) ಇತ್ತೀಚೆಗೆ ಮನೆಯಿಂದ ಬೆಂಗಳೂರಿಗೆ ಹೋಗುವುದಾಗಿ ತಿಳಿಸಿ ಹೋದವರು ಕಾಣೆಯಾಗಿದ್ದಾರೆ. 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಎಣ್ಣೆ ಕೆಂಪು ಬಣ್ಣ, ಎರಡು ಕಾಲಿನಲ್ಲಿ ಬಿಳಿ ಮಚ್ಚೆಗಳು, 9ನೇ ತರಗತಿವರೆಗೆ ಓದಿದ್ದು ಕನ್ನಡ ಮಾತನಾಡುತ್ತಾರೆ. ಬಿಸ್ಕತ್ ಕಲರ್ ತುಂಬುತೋಳಿನ ಶರ್ಟ್ ಕಪ್ಪು ಪ್ಯಾಂಟು ಧರಿಸಿದ್ದರು. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ದೂ 08172-268410, ಜಿಲ್ಲಾ ನಿಸ್ತಂತು ವಿಭಾಗ 08172-268845 ಹೊಳೆನರಸೀಪುರ ಠಾಣೆ 08175-273308ಸಂಪರ್ಕಿಸಿ.
ಕಾಲೇಜಿನಲ್ಲಿ ಪಿಡಿಯಾಟ್ರಿಕ್ಸ್ ಕಾರ್ಯಾಗಾರ
ಹಾಸನ: ಭಾರತೀಯ ಪಿಡಿಯಾಟ್ರಿಕ್ ಸಂಸ್ಥೆ ಹಾಗೂ ಹಾಸನ ವೈದ್ಯಕೀಯ ಕಾಲೇಜಿನ ಪಿಡಿಯಾಟ್ರಿಕ್ಸ್ ವಿಭಾಗದ ಸಂಯುಕ್ತಾಶ್ರಯದಲ್ಲಿ ವೈದ್ಯರು ಹಾಗೂ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಿತು.
ವೈದ್ಯಕೀಯ ಕಾಲೇಜಿನಲ್ಲಿ ನಡೆದ ಕಾರ್ಯಾಗಾರವನ್ನು ಭಾರತೀಯ ಪಿಡಿಯಾಟ್ರಿಕ್ಸ್ ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ಪ್ರೊ.ಆರಿಬ್ ಅಹಮ್ಮದ್ ಉದ್ಘಾಟಿಸಿ, ವೈದ್ಯರು ಹಾಗೂ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಿ ಮಾಹಿತಿ ನೀಡಿದರು. ರಾಜ್ಯ ಸಂಯೋಜಕ ಕರುಣಾಕರ್, ಡಾ. ದೊಡ್ಡೇಗೌಡ, ಪಟ್ಟಾಭಿ ಇನ್ನೂ ಮೊದಲಾದವರು ಭಾಗವಹಿಸಿದ್ದರು.
'ನಂದಿನಿ ಹಾಲು ಬಳಸಿದರೆ ರೈತರಿಗೆ ಹೆಚ್ಚು ಸಹಾಯ'
ಕಿತ್ತೂರು: ಸಾರ್ವಜನಿಕರು ಕೆಎಂಎಫ್ ನೀಡುವ ನಂದಿನಿ ಹಾಲನ್ನು ಹೆಚ್ಚಾಗಿ ಬಳಸಿದಲ್ಲಿ ರೈತರಿಗೆ ಅನುಕೂಲವಾಗುತ್ತದೆ ಎಂದು ಶಾಸಕ ಕೆ. ವೆಂಕಟೇಶ್ ಹೇಳಿದರು.ಕಿತ್ತೂರಿನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಹಾಗೂ ಬಿಎಂಸಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ 14ನೇ ಬಿಎಂಸಿ ಕೇಂದ್ರ ಕಿತ್ತೂರಿನಲ್ಲಿ ಸ್ಥಾಪಿಸಿದ್ದು, ಇದರಿಂದ 56 ಸಾವಿರ ಲೀಟರ್ನಷ್ಟು ಹಾಲು ಶೇಖರಣೆಯಾಗಿ ಒಕ್ಕೂಟಕ್ಕೆ ಹೋಗುತ್ತಿದೆ. ನಮ್ಮ ಜನರು ನಂದಿನಿ ಹಾಲನ್ನು ಹೆಚ್ಚು ಬಳಸಬೇಕು. ಈ ಮೂಲಕ ರೈತರಿಗೆ ಸಹಕರಿಸಬೇಕು ಎಂದು ಅವರು ತಿಳಿಸಿದರು.