ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಪರಾಧ ಪ್ರಕರಣ ಮುಂಚಿತ ತಿಳಿಯಲು ಪೊಲೀಸರು ಬ್ರಹ್ಮಜ್ಞಾನಿಗಳಲ್ಲ: ಜಿಲ್ಲಾ ಎಸ್ಪಿ

Rashmi Kasaragodu
Updated On : 8 Oct 2013, 12:36 pm

ಕ.ಪ್ರ. ವಾರ್ತೆ೤ ಅರಸೀಕೆರೆ೤ ಅ.7
ಅಪರಾಧ ಅಥವಾ ಅಪಘಾತ ಪ್ರಕರಣಗಳನ್ನು ಮುಂಚಿತವಾಗಿಯೇ ತಿಳಿಯಲು ಪೊಲೀಸರು ಏನು ಬ್ರಹ್ಮಜ್ಞಾನಿಗಳಲ್ಲ. ಆದರೆ ಸಾರ್ವಜನಿಕರ ಜೊತೆಯಲ್ಲಿ ಉತ್ತಮ ಒಡನಾಟ ಬೆಳೆಸಿಕೊಂಡಿದ್ದರೆ ಮಾತ್ರ ಹಲವು ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಹೇಳಿದರು.
 ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿ ನಂತರ ಮಾತನಾಡಿದರು.
 ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲು ಪೊಲೀಸ್ ಇಲಾಖೆ ಜನಸಂಪರ್ಕ ಸಭೆಗಳನ್ನು ನಡೆಸುತ್ತಿದ್ದು, ಪ್ರತಿ ಜನಸಂಪರ್ಕ ಸಭೆಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗವಹಿಸುವ ಮೂಲಕ ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ: ಪ್ರತಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದು ಕೊಳ್ಳಬೇಕು. ಅಂತೆಯೇ ಸಾರ್ವಜನಿಕರು ಕೂಡ ಪೊಲೀಸ್ ಅಧಿಕಾರಿಗಳಿಗೆ ನೀಡುವ ಗೌರವವನ್ನೆ ಸಾಮಾನ್ಯ ಪೊಲೀಸ್ ಪೇದೆಗಳಿಗೂ ನೀಡುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕೆಂದರು.
 ಅನಿರೀಕ್ಷಿತವಾಗಿ ನಡೆಯುವ ಅವಘಡಗಳನ್ನು ಮುಂಚಿತವಾಗಿ ತಿಳಿದು ತಪ್ಪಿಸಲು ಪೊಲೀಸ್ ಸಿಬ್ಬಂದಿ ಬ್ರಹ್ಮಜ್ಞಾನಿ ಆಗಲು ಸಾಧ್ಯವಿಲ್ಲದ ಕಾರಣ ಮುಂಜಾಗ್ರತೆ ವಹಿಸುವುದು ಪೊಲೀಸರ ಆದ್ಯ ಕರ್ತವ್ಯ. ಆ ಕಾರಣ ಅವರ ಕರ್ತವ್ಯ ನಿರ್ವಹಣೆಯಲ್ಲಿ ಸಾರ್ವಜನಿಕರು ಹಸ್ತಕ್ಷೇಪ ಮಾಡದೆ ಪರಸ್ಪರ ಸಹಕಾರ ಮನೋಭಾವನೆಯಿಂದ ಬೆಂಬಲಿಸಿದರೆ ಎಂತಹ ಸಂಕಷ್ಟದ ಪರಿಸ್ಥಿತಿಯನ್ನೂ ಸುಲಭ ಸಾಧ್ಯದಲ್ಲಿ ಪರಿಹರಿಸಬಹುದೆಂದರು.
ನಿಯಮ ಕಡ್ಡಾಯ ಪಾಲಿಸಿದರೆ: ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಸಾಧ್ಯವಾದ ಮಟ್ಟಿಗೆ ನಿಯಂತ್ರಣದಲ್ಲಿದೆ.
 ಪಟ್ಟಣ ಪ್ರದೇಶದಲ್ಲಿ ಪಾದಚಾರಿ ರಸ್ತೆಗಳಲ್ಲಿರುವ ಅಂಗಡಿಗಳಿಗೆ ಪರ್ಯಾಯ ವ್ಯವಸ್ಥೆಯಾಗದೆ ಮುಕ್ತವಾಗದ ಕಾರಣ ಪಾದಚಾರಿಗಳು ಹರಸಾಹಸ ಪಟ್ಟು ರಸ್ತೆಯಲ್ಲಿಯೇ ಸಂಚರಿಸುವ ದುಸ್ಥಿತಿಯಲ್ಲಿದ್ದಾರೆ. ವಾಹನ ಚಾಲಕರು ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸುವುದಿಲ್ಲವೋ ಅಲ್ಲಿಯವರೆಗೂ ಸಂಚಾರ ವ್ಯವಸ್ಥೆಯ ಸಮಸ್ಯೆಗಳು ತಪ್ಪುವುದಿಲ್ಲ. ಆಟೋ ಚಾಲಕರಿಗೆ ಇಲ್ಲ ಸಲ್ಲದ ತೊಂದರೆ ನೀಡುವುದಿಲ್ಲ. ಆದರೆ ಪ್ರಯಾಣಿಕರ ಹಿತದೃಷ್ಟಿಯಿಂದ ವಾಹನದ ಅಧಿಕೃತ ದಾಖಲೆಗಳು ಮತ್ತು ಚಾಲನಾ ಪರವಾನಗಿ ಕಡ್ಡಾಯವಾಗಿ ಹೊಂದಿರ ಬೇಕು ಎಂದು ತಿಳಿಸಿದರು.
ಶಾಲಾ-ಕಾಲೇಜುಗಳಲ್ಲಿ ತೆರೆದಮನೆ: ಶಾಲಾ-ಕಾಲೇಜುಗಳಲ್ಲಿ ತೆರೆದಮನೆ ಕಾರ್ಯಕ್ರಮದ ಮೂಲಕ ಯುವಜನಾಂಗದವರಲ್ಲಿ ಕಾನೂನು ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಕುರಿತು ಹೆಚ್ಚಿನ ಜಾಗೃತೆ ವಹಿಸಲು ಸೂಚನೆ ನೀಡಲಾಗಿದೆ. ಪಟ್ಟಣದಲ್ಲಿ ನಡೆದ ಅನೇಕ ಕಳವು ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು, ಹೆಚ್ಚಿನ ಕ್ರಿಮಿನಲ್ಪ್ರಕರಣ ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದೇವೆ. ಕಾನೂನು ಸುವ್ಯವಸ್ಥೆ ಸಂಬಂಧ ಜನರು ಪೊಲೀಸ್ ಇಲಾಖೆಗೆ ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು.   
  ಪಟ್ಟಣದ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿರುವ ಪೇಟೆಬೀದಿ ವೃತ್ತದಲ್ಲಿ ಈಗಾಗಲೇ ಸಿ.ಸಿ.ಕ್ಯಾಮೆರಾ  ಅಳವಡಿಸಲಾಗಿದೆ. ಇನ್ನೂ ಹಲವು ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಲಾಗುವುದು.
 ಅಲ್ಲದೆ ಡಾ.ಅಂಬೇಡ್ಕರ್ ವೃತ್ತದಲ್ಲಿ ಸಿಗ್ನಲ್ಲೈಟ್ಗಳ ಅಳವಡಿಕೆಗೆ ಕ್ರಮಕೈಗೊಳ್ಳಲಾಗಿದೆ. ಅತ್ಯಂತ ಅವಶ್ಯಕವುಳ್ಳ ಪ್ರದೇಶಗಳಲ್ಲಿ ಸಾರ್ವಜನಿಕ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.
 ಜನಸಂಪರ್ಕ ಸಭೆಯಲ್ಲಿ ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ, ಪುರಸಭಾ ಅಧ್ಯಕ್ಷ ಮೋಹನ್ಕುಮಾರ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಣ್ಣಾನಾಯಕನಹಳ್ಳಿ ವಿಜಯಕುಮಾರ್, ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಯೋಗೀಶಾಚಾರ್, ಜಿ.ಎನ್.ಮಧು, ಹಿರಿಯ ಪತ್ರಕರ್ತ ಎಚ್.ಡಿ.ಸೀತಾರಾಮು ಸೇರಿ ಇನ್ನೂ ಅನೇಕ ಗಣ್ಯರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.   ಪ್ರಭಾರಿ ಡಿವೈಎಸ್ಪಿ ಶೃತಿ, ಗ್ರಾಮಾಂತರ ವೃತ್ತ ಆರಕ್ಷಕ ನಿರೀಕ್ಷಕ ಗಂಗಾಧರಪ್ಪ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement