ಅಭಿವೃದ್ಧಿಗೆ ಸ್ಪಂದಿಸದಿದ್ದರೆ ಸಿಎಂ ಮನೆ ಮುಂದೆ ಧರಣಿ
ಕ.ಪ್ರ. ವಾರ್ತೆ ಅರಕಲಗೂಡು ಅ.7
ಮುಖ್ಯಮಂತ್ರಿಗಳು ಜಿಲ್ಲೆಗೆ ಬರುತ್ತಿರುವುದು ಸಂತೋಷದ ವಿಷಯ. ಈ ಬಗ್ಗೆ ತಮಗಾಗಲಿ, ಇತರೆ ಶಾಸಕರಿಗಾಗಲೀ ಆಹ್ವಾನ ಬಂದಿಲ್ಲ. ಈ ಬಗ್ಗೆ ತಮಗೇನೂ ಬೇಸರವಿಲ್ಲ. ಜಿಲ್ಲೆಯಲ್ಲಿ ಸಮಸ್ಯೆಗಳ ಆಗರವಿದೆ. ಪಕ್ಷದ ಕಾರ್ಯಕರ್ತರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಬಹುದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು.
ತಾಲೂಕಿನ ವಡ್ಡರಹಳ್ಳಿಯಲ್ಲಿನ ಸಮುದಾಯ ಭವನ ಉದ್ಘಾಟನಾ ಸಮಾರಂಭಕ್ಕೆ ಸೋಮವಾರ ಆಗಮಿಸಿದ್ದ ಅರಕಲಗೂಡಿನಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್ಗೆ ಬಂದಿಳಿದ ನಂತರ ಇಲ್ಲಿನ ಪ್ರವಾಸಿ ಮಂದಿರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮುಖ್ಯಮಂತ್ರಿ ಕಾರ್ಯಕ್ರಮ ಕುರಿತು ನಮಗೆ ಯಾವ ಮಾಹಿತಿಯೂ ಇಲ್ಲ. ಆದರೆ ಜಿಲ್ಲೆಯ ಅಭಿವೃದ್ಧಿ ಬಗೆಗೆ ನಿರ್ಲಕ್ಷ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ತಾವು ಈ ಹಿಂದೆಯೂ ಎಸ್.ಎಂ.ಕೃಷ್ಣ ಮತ್ತು ಯಡಿಯೂರಪ್ಪ ಅವರ ಮನೆ ಮುಂದೆ ಧರಣಿ ಕುಳಿತಿದ್ದೀನಿ. ಈಗಲೂ ಶಾಂತಿಯುತ ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ನುಡಿದರು.
ಅದು ಸಂತೋಷದ ವಿಷಯವಲ್ಲವೇ: ಇದೇ ವೇಳೆ ಹಣ ಇಲ್ಲದ ಕಾರಣಕ್ಕಾಗಿ ಮೆಡಿಕಲ್ ಕಾಲೇಜುಗೆ ಬೀಗ ಹಾಕಿದೆ. ಒಮ್ಮೆ ಅಲ್ಲಿಗೂ ಭೇಟಿ ನೀಡಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ಜಿಲ್ಲೆಯಲ್ಲಿ ಜನತಾ ದರ್ಶನ ಮಾಡುತ್ತಿರುವ ಬಗೆಗೆ ಪ್ರಸ್ತಾಪಿಸಿದಾಗ ಮಾಡಲಿ ಸಂತೋಷ ಎಂದ ಗೌಡರು, ಈ ಹಿಂದೆ ರಾಮಕೃಷ್ಣ ಹೆಗಡೆ ಸಣ್ಣದಾಗಿ ಈ ಕಾರ್ಯಕ್ರಮ ಆರಂಭಿಸಿದರು.
ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆದು ಜನರ ಸಮಸ್ಯೆಗಳು ಬಗೆಹರಿದರೆ ಅದು ಸಂತೋಷದ ವಿಷಯವಲ್ಲವೇ ಎಂದು ಹೇಳಿದರು.
ಹಾಸನದ ಬೈಪಾಸ್ ರಸ್ತೆ ಆದ ನಂತರ ಡೈರಿಯಿಂದ ಊರೊಳಗಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಈ ರಸ್ತೆಗಳು ಯಾರ ಶಿಶು ಎಂಬುದನ್ನು ಗಮನಿಸಬೇಕು ಎಂದ ಅವರು, ವರ್ಲ್ಡ್ ಬ್ಯಾಂಕಿನಿಂದ 80 ಕೋಟಿ ರು. ಅಭಿವೃದ್ಧಿಗಾಗಿ ಮಂಜೂರಾಯಿತು. ಎಷ್ಟು ಅಭಿವೃದ್ಧಿಯಾಗಿದೆ. ಅರಸೀಕೆರೆಯಲ್ಲಿ ಮಳೆ ಆಗಿಲ್ಲ. ಸುಮಾರು 10 ಲಕ್ಷ ತೆಂಗಿನ ಮರಗಳು ನಾಶವಾಗಿರುವ ವರದಿಗಳಿವೆ. ಅದಕ್ಕಾಗಿ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಪರಮೇಶ್ವರ್ ಹೇಳಿಕೆ ಔಚಿತ್ಯವೋ ಅಲ್ಲವೋ: ಹಿಂದುಳಿದವರ ಅಭಿವೃದ್ಧಿಗಾಗಿ ಅಹಿಂದಾ ಮಾದರಿ ಕಾರ್ಯಕ್ರಮಗಳ ಬಗೆಗೆ ಪ್ರಸ್ತಾಪವಾಗುತ್ತಿರುವ ಬಗ್ಗೆ ಮಾತನಾಡಿದ ದೇವೇಗೌಡರು ಆ ಬಗ್ಗೆ ತಮ್ಮದೇನು ಆಕ್ಷೇಪಣೆ ಇಲ್ಲ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಅಲ್ಪಸಂಖ್ಯಾತರಿಗೆ ನೀಡುವ ಸೌಲಭ್ಯ ಕುರಿತು ಆಡಿರುವ ಮಾತುಗಳಿಗೆ ನಾನೇನೂ ಪ್ರತಿಕ್ರಿಯಿಸುವುದಿಲ್ಲ.
ಅವರದ್ದು ರಾಷ್ಟ್ರೀಯ ಪಕ್ಷ. ಅವರು ಆ ಪಕ್ಷದ ಅಧ್ಯಕ್ಷರು. ಅವರ ಹೇಳಿಕೆ ಔಚಿತ್ಯವೋ ಅಲ್ಲವೋ ಎಂಬುದನ್ನು ಆ ಪಕ್ಷದ ಅಧಿನಾಯಕಿ ತೀರ್ಮಾನಿಸುತ್ತಾರೆ ಎಂದು ಹೇಳಿದರು.
ಜಿಲ್ಲೆಯ ಕೀಳುಮಟ್ಟದ ರಾಜಕೀಯ ಕುರಿತು ಹಾಗೂ ಹಾಸನ-ಬೆಂಗಳೂರು ಮತ್ತು ಹಾಸನ ರೇಲ್ವೆ ನಿಲ್ದಾಣ ನಿರ್ಮಾಣ ಕುರಿತಂತೆ ನಡೆದ ರಾಜಕೀಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಸಚಿವ ಎಚ್.ಡಿ.ರೇವಣ್ಣ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಸತೀಶ್, ಜೆಡಿಎಸ್ ಮುಖಂಡ ಎಂ.ಎಸ್.ರಮೇಶ್,ತಾಲೂಕು ಪಂಚಾಯಿತಿ ಸದಸ್ಯ ಎಂ.ಎಸ್.ಯೋಗೇಶ್ ಇತರರು ಇದ್ದರು.