ಅಲ್ಪಸಂಖ್ಯಾತರ ಹಿತರಕ್ಷಣಾ ಸಮಿತಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಹಾಸನ ಅ. 7
ಅಲ್ಪಸಂಖ್ಯಾತರ ಸಾಲದ ಯೋಜನೆಯಲ್ಲಿ ಹೊಸದಾಗಿ ರೂಪಿಸಿರುವ ಷರತ್ತುಗಳನ್ನು ರದ್ದುಪಡಿಸಿವಂತೆ ಆಗ್ರಹಿಸಿ ಜಿಲ್ಲಾ ಅಲ್ಪಸಂಖ್ಯಾತರ ಹಿತರಕ್ಷಣಾ ಸಮತಿ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಪ್ರತಿ ವರ್ಷ ಅಲ್ಪಸಂಖ್ಯಾತರ ನಿಗಮದಿಂದ ಹಲವಾರು ಯೋಜನೆಗಳು ಜಾರಿಯಾಗುತ್ತವೆ. ಶ್ರಮಶಕ್ತಿ, ಅರಿವು ಯೋಜನೆ, ಗಂಗಾಕಲ್ಯಾಣ ಯೋಜನೆ, ವಾಹನ ತರಬೇತಿ ಮತ್ತು ನೇರ ಸಾಲ ಸೇರಿದಂತೆ ಹತ್ತಾರು ಯೋಜನೆಗಳಿವೆ. ಈ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳು ಇದರ ಲಾಭ ಪಡೆಯಲು ಸುಮಾರು ನಾಲ್ಕೈದು ತಿಂಗಳು ಕಳೆದಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಕೇಂದ್ರ ಅಲ್ಪಸಂಖ್ಯಾತರ ನಿಗಮ ಹೊಸ ನಿಯಮಾವಳಿಯನ್ನು ಜಾರಿಗೆ ತಂದಿದ್ದು, ನಿಗಮದಿಂದ ಸಾಲ ಮತ್ತು ಧನ ಸಹಾಯಕ್ಕೆ ಅರ್ಜಿ ಸಲ್ಲಿಸಲು ಒಂದು ಲಕ್ಷ ಅಥವಾ ಅದರ ಮೇಲ್ಪಟ್ಟ ಯೋಜನೆಗೆ ಅರ್ಜಿ ಸಲ್ಲಿಸಬೇಕಾದ ಇಬ್ಬರು ಸರ್ಕಾರಿ ನೌಕರರ ಶೂರಿಟಿ ಬೇಕು. ಆ ಸರ್ಕಾರಿ ನೌಕರರು ಕನಿಷ್ಟ 20 ಸಾವಿರ ವೇತನ ಪಡೆಯುತ್ತಿರಬೇಕು ಮತ್ತು ನಿವೃತ್ತಿಗೆ 8 ವರ್ಷ ಉಳಿದಿರಬೇಕು. ಅದಾದ ಮೇಲೆ ಅಗ್ರಿಮೆಂಟ್ ಸೇರಿದಂತೆ ಇತರೆ ನಿಯಮಗಳನ್ನು ಜಾರಿಗೆ ತಂದಿದೆ.
ಸರ್ಕಾರ ಒಂದು ಕಡೆ ಅಲ್ಪಸಂಖ್ಯಾತರಿಗೆ ಯೋಜನೆಗಳು ಮತ್ತು ಧನ ಸಹಾಯ ಸಾಲ ಜಾರಿ ಮಾಡುವುದು ಮತ್ತು ಇನ್ನೊಂದೆಡೆ ಈ ರೀತಿ ನಿಯಮಗಳನ್ನು ಜಾರಿ ಮಾಡಿ ಸದ್ಬಳಕೆ ಆಗದಿದ್ದಾಗ ಅದು ವಾಪಸ್ ಖಜಾನೆಗೆ ಸೇರುತ್ತದೆ.
ಸದ್ಬಳಕೆ ಮಾಡದೆ ಆ ಹಣ ವಾಪಸ್ ಆಗಿದೆ. ಈ ಹೊಸ ನಿಯಮಾವಳಿಯಿಂದ ನೇರ ಸಾಲವಾಗಲಿ ಅಥವಾ ಆಟೋರಿಕ್ಷಾಗಳಿಗೆ ಅರ್ಜಿ ಸಲ್ಲಿಸಿದಾಗಇದರಿಂದ ಶೇ.1ರಷ್ಟು ಅಲ್ಪಸಂಖ್ಯಾತರು ಲಾಭ ಪಡೆಯಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನ ನಗರಕ್ಕೆ ಸಂಬಂಧಿದಂತೆ ಕಳೆದ ವರ್ಷ ಆಟೋ ರಿಕ್ಷಾಗಾಗಿ 16 ಅರ್ಹ ಫಲಾನುಭವಿಗಳು ನೇರ ಸಾಲದಡಿ ಅರ್ಜಿ ಸಲ್ಲಿಸಿ ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು, ಶೂರಿಟಿ, ಕೋಟೆಷನ್, ಚೆಕ್ಗಳು ಹಾಗೂ ಇತರೆ ಸಂಬಂಧಿಸಿದ ದಾಖಲೆ ಸಲ್ಲಿಸಿ ಸುಮಾರು ಒಂದುವರೆ ವರ್ಷ ಕಳೆದಿದೆ.
ಸೆಪ್ಟಂಬರ್ ಅಂತ್ಯದಲ್ಲಿ ಆಟೋ ರಿಕ್ಷಾ ಪಡೆಯಬಹುದು ಎಂಬ ಭಾವನೆಯಲ್ಲಿ ಇದ್ದಾಗ ಅಷ್ಟರಲ್ಲಿ ಕೇಂದ್ರ ಅಲ್ಪಸಂಖ್ಯಾತರ ನಿಗಮದಿಂದ ನಿಯಮ ಜಾರಿಯಾಗಿರುವುದರಿಂದ ಆಟೋರಿಕ್ಷಾಕ್ಕೆ ಅರ್ಜಿಸಲ್ಲಿಸಿರುವ ಫಲಾನುಭವಿಗಳು ಈ ಯೋಜನೆಯಡಿಗೆ ಸೇರಿದ್ದಾರೆ. ಈ ನಿಯಮ ಜಾರಿಯಿಂದ ಅಲ್ಪಸಂಖ್ಯಾತರಿಗೆ ತೊಂದರೆ ಉಂಟಾಗಿ ಎಂದು ಅಲವತ್ತುಕೊಂಡರು.
ಹೊಸ ನಿಯಮ ರದ್ದು ಪಡಿಸಿ ಹಳೇ ನಿಯಮಾವಳಿಗಳು ಸುಧಾರಿಸಿ ಅಲ್ಪಸಂಖ್ಯಾತರಿಗೆ ನೇರವಾಗಿ ಸಿಗುವಂತಹ ಯೋಜನೆ ಜಾರಿ ನೀಡಬೇಕು. ಹಾಗೆ ರಾಷ್ಟ್ರೀಕೃತ ಬ್ಯಾಂಕ್ಗಳು ಫಲಾನುಭವಿಗಳನ್ನು ಅಲೆದಾಡಿಸದೆ ಅನುಮೋದನೆ ಪತ್ರ ನೀಡಲು ಸರ್ಕಾರ ಬ್ಯಾಂಕ್ಗ್ಳಿಗೆ ಸೂಚನೆ ಹೊರಡಿಸಬೇಕು ಮತ್ತು ಗೃಹ ನಿರ್ಮಾಣ ಸಾಲ ಯೋಜನೆಯಡಿ ಕ್ರಿಶ್ಚಿಯನ್ನರಿಗೆ ಮಾತ್ರ 5 ಲಕ್ಷ ರು.ಸಾಲದಲ್ಲಿ 1 ಲಕ್ಷ ರು.ಬಡ್ಡಿ ಧನ ಸಹಾಯ ನೀಡಲಾಗುತ್ತಿದೆ.ಈ ಯೋಜನೆಯನ್ನು ಎಲ್ಲ ಅಲ್ಪಸಂಖ್ಯಾತರಿಗೆ ಸಾರ್ವಜನಿಕವಾಗಿ ಜಾರಿ ಮಾಡಬೇಕು ಹಾಗೂ 5 ಲಕ್ಷ ರು.ಸಾಲದಿಂದ 10 ಲಕ್ಷ ರು.ವರೆಗೆ ಏರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಮುಬಾಶಿರ್ ಅಹಮದ್, ಸಮೀರ್ ಅಹಮದ್, ಮಹಮದ್ಖಾನ್, ಯಾಸೀನ್ಪಾಷ, ಅಕ್ರಂ, ಜಕೀರ್, ಅಸ್ಲಾಂ, ವಸೀಂ, ಮುಬಾರಕ್, ಸೈಯದ್, ಮರಿಜೋಸೆಪ್ ಇದ್ದರು.