ತರಾತುರಿಯಲ್ಲಿ ಜೆಡಿಎಸ್ ಶಾಸಕರಿಗೆ ಆಹ್ವಾನ
ಹಾಸನ: ಮುಖ್ಯಮಂತ್ರಿಗಳು ಅ. 8 ರಂದು ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆಸುವ ಪ್ರಗತಿ ಪರಿಶೀಲನೆ ಸಭೆಗೆ ವಿರೋಧಪಕ್ಷ ಜೆಡಿಎಸ್ ಶಾಸಕರನ್ನು ತರಾತುರಿಯಲ್ಲಿ ಆಹ್ವಾನಿಸಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.
ಜಿಲ್ಲಾಡಳಿತ ಅ. 7 ರಂದು ಸಂಜೆ 4.30 ರಿಂದ 5 ರಲ್ಲಿ ಜೆಡಿಎಸ್ ಶಾಸಕರಿಗೆ ಸಿಎಂ ಸಭೆ ನಡೆಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅದು ತಮಗೆ ನೇರವಾಗಿ ತಿಳಿಸಿಲ್ಲ. ತಮ್ಮ ಪಿಎಗೆ ತಿಳಿಸಿದ್ದಾರೆ. ನೇರವಾಗಿ ಒಂದು ಅಥವಾ ಎರಡು ದಿನಗಳ ಮುಂಚೆ ತಮಗೆ ತಿಳಿಸಬಹುದಿತ್ತು ಎಂದು ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದ್ದಾರೆ.
ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಂ ಕೂಡ ಸೋಮವಾರ ಬೆಳಗ್ಗೆ ಸಂಬಂಧಪಟ್ಟವರಿಗೆ ಪೋನ್ ಮಾಡಿ ಕೆಡಿಪಿ ಸಭೆಗೆ ತಮಗೆ ಆಹ್ವಾನ ಬಂದಿಲ್ಲ. ಸಭೆ ನಡೆಯುತ್ತದೆಯೋ ಇಲ್ಲವೋ ಎಂದು ಪ್ರಶ್ನಿಸಿದ್ದಾರೆ.
ಆಗ ಅಧಿಕಾರಿಗಳು ದೂರವಾಣಿಗೆ ಮೂಲಕ ತರಾತುರಿಯಲ್ಲಿ ಶಾಸಕರಿಗೆ ತಿಳಿಸಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರು, ಅರಕಲಗೂಡಿನಲ್ಲಿ ಸಿಎಂ ಸಭೆ ಬಗ್ಗೆ ತಮಗೇನು ಮಾಹಿತಿ ಬಂದಿಲ್ಲ. ಕಾಂಗ್ರೆಸ್ ಕಾರ್ಯಕರ್ತರು, ಅಧಿಕಾರಿಗಳೊಡನೆ ಚರ್ಚಿಸಿ ಜಿಲ್ಲೆ ಸಮಸ್ಯೆಗಳನ್ನು ಬಗೆಹರಿಸಲಿ. ಅಷ್ಟೇ ಸಾಕು ಎಂದು ವ್ಯಂಗ್ಯವಾಡಿದ್ದಾರೆ.
ಸಿಎಂ ಕಾರ್ಯಕ್ರಮ ನಿಗದಿಯಾಗಿ 10 ದಿನಗಳಾಗಿವೆ. ಆದರೂ ಮುಂಚಿತವಾಗಿ ತಿಳಿಸದೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನಿಸಲಾಗಿದೆ ಎಂದು ಟೀಕಿಸಲಾಗಿದೆ.
ಅಧಿಕಾರಿಗಳು ಆಳುವವರನ್ನು ಸಂತೃಪ್ತಿಪಡಿಸಲು ವಿರೋಧಿ ಶಾಸಕರನ್ನು ಅವಮಾನಿಸುವುದು ಸರಿಯಲ್ಲ. ಇದರಿಂದಲೇ ಗೊಂದಲ ಮತ್ತು ಅಶಾಂತಿಯುತ ವಾತಾವರಣ ಸೃಷ್ಟಿಯಾಗುತ್ತದೆ. ಇಂಥ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೇ ಹೋರಾಟ ಇದ್ದೇ ಇರುತ್ತದೆ ಎಂದು ಜೆಡಿಎಸ್ ಶಾಸಕರು ಗುಡುಗಿದ್ದಾರೆ.