ಪ್ರವಾಸಿ ಮಂದಿರಕ್ಕೆ ಸಿಎಂ ಭೇಟಿ ಹಿನ್ನೆಲೆ: ತರಾತುರಿಯಲ್ಲಿ ಕೈಗೊಂಡ ಸ್ವಚ್ಛತಾ ಕಾರ್ಯ
ಹೊಳೆನರಸೀಪುರ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನಿಂದ ಪಟ್ಟಣದ ಮೂಲಕ ಹಾಸನಕ್ಕೆ ತೆರಳುವ ಮಾರ್ಗ ಮಧ್ಯೆ ಇಲ್ಲಿನ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರಕ್ಕೆ ಬೆಳಗಿನ ಉಪಹಾರಕ್ಕೆ ಆಗಮಿಸುವರೆಂಬ ಮಾಹಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳು ತರಾತುರಿಯಲ್ಲಿ ಸೋಮವಾರ ಸ್ವಚ್ಚತಾ ಕಾರ್ಯ ಕೈಗೊಳ್ಳ ತೊಡಗಿದ್ದಾರೆ. ಮುಖ್ಯಮಂತ್ರಿಗಳು ರಸ್ತೆ ಮಾರ್ಗವಾಗಿ ಮೈಸೂರಿನಿಂದ ಕೆ.ಆರ್.ನಗರ-ಹೊಳೆನರಸೀಪುರ ಮಾರ್ಗವಾಗಿ ಹಾಸನಕ್ಕೆ ತೆರಳುವರೆಂಬ ಮಾಹಿತಿಯ ಹಿನ್ನೆಲೆಯಲ್ಲಿ ದಾರಿಯುದ್ದಕ್ಕೂ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಅಲ್ಲಲ್ಲಿ ಕಾಂಗ್ರೆಸ್ ಮುಖಂಡರು ಸಿದ್ಧತೆಯಲ್ಲಿ ತೊಡಗಿದ್ದಾರೆ. ಪಟ್ಟಣದಲ್ಲಿ ಕೆಲ ಕಾಂಗ್ರೆಸಿಗರು ತಾಲೂಕಿನ ಪ್ರಮುಖ ಸಮಸ್ಯೆಗಳ ಕುರಿತಂತೆ ಅಲ್ಲದೇ, ತಾಲೂಕಿನಲ್ಲಿ ಕಾಂಗ್ರೆಸ್ನ ಬಲವರ್ಧನೆಗೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತಂತೆ ಹಾಗೂ ಪರಿಪೂರ್ಣ ನಾಯಕತ್ವವನ್ನು ಗುರುತಿಸುವಂತೆ ಮುಖ್ಯಮಂತ್ರಿಗಳ ಗಮನಸೆಳೆಯಲು ಸಿದ್ದರಾಗಿದ್ದಾರೆ.