ಮಾದಿಗ ದಂಡೋರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಹಾಸನ ಅ. 7
ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾದಿಗ ದಂಡೋರ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಪ್ರಸ್ತುತ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಎಲ್ಲಾ ರಾಜಕೀಯ ಪಕ್ಷಗಳ ಅಧಿಕಾರದ ಅವಧಿಯಲ್ಲಿ ಭ್ರಷ್ಟಾಚಾರ, ದಬ್ಬಾಳಿಕೆ, ದೌರ್ಜನ್ಯ ಸರ್ವೇ ಸಾಮಾನ್ಯವಾಗಿದೆ. ಅನ್ಯಾಯ ಅಕ್ರಮ ಎಸಗಿರುವ ಅಧಿಕಾರಿಗಳು ಮತ್ತು ಭ್ರಷ್ಟ ರಾಜಕಾರಣಿಗಳನ್ನು ಸಂರಕ್ಷಿಸಿಕೊಂಡು ಬಂದಿರುವ ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳು ಉದ್ದೇಶ ಪೂರ್ವಕವಾಗಿ ಹಿರಿಯ ಐಎಎಸ್ ಅಧಿಕಾರಿ ಹಾಗೂ ರಾಜ್ಯ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳಭೀಮಪ್ಪರನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ ಎಂದು ಆರೋಪಿಸಿದರು. ಗೋನಾಳ ಭೀಮಪ್ಪನವರ ಅಧಿಕಾರಾವಧಿಯಲ್ಲಿ ಐಎಎಸ್, ಕೆಎಎಸ್ ಹಾಗೂ ಕೆಪಿಎಸ್ಸಿಯಿಂದ ತುಂಬಿರುವ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವೆಸಗಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಲಿ. ಆದರೆ ಗೋನಾಳ್ರ ಅಧಿಕಾರವಧಿಯಲ್ಲಿ ಯಾವ ರಾಜಕೀಯ ಪಕ್ಷಗಳು ಮತ್ತು ಅದರ ನಾಯಕರು, ಮಂತ್ರಿಗಳು, ಶಾಸಕರು ದೂರವಾಣಿ ಮುಖಾಂತರ ಹಾಗೂ ಯಾವುದೇ ರೀತಿಯಲ್ಲೂ ಶಿಫಾರಸು ಮಾಡಿ ಒತ್ತಡ ತಂದಿದ್ದಾರೋ ಅಂತವರ ಮೇಲೂ ಸಹ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಉದ್ದೇಶಪೂರ್ವಕವಾಗಿ ಗೋನಾಳ್ ಭೀಮಪ್ಪನವರು ಪರಿಶಿಷ್ಟಜಾತಿಗೆ ಸೇರಿದವರೆಂಬ ಕಾರಣಕ್ಕೆ ಒಂದು ಸಮಾಜವನ್ನು ಅವನತಿಗೆ ತಳ್ಳುವಂತಹ ಕೆಲಸಕ್ಕೆ ಸರ್ಕಾರ ಕೈಹಾಕಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಹೇಳಿದರು.
ಕಳೆದ 25 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪರಿಶಿಷ್ಟಜಾತಿ, ವರ್ಗದ ನೌಕರರ ಕಾಯಂಮಾತಿಗೆ ಶಿಫಾರಸು ಮಾಡಿ ಕಳೆದ 4 ತಿಂಗಳ ಬಾಕಿ ವೇತನ ನೀಡಬೇಕು. ಈ ಸಂಬಂಧ ದುರಹಂಕಾರದಿಂದ ವರ್ತಿಸುತ್ತಿರುವ ಡಿಎಫ್ಓ ಲಕ್ಷ್ಮಣ್ರನ್ನು ವರ್ಗಾವಣೆ ಮಾಡಬೇಕು.ರಾಜ್ಯಾದ್ಯಂತ ಪೌರ ಕಾರ್ಮಿಕರಿಗೆ ನಿವೇಶನ ನೀಡಬೇಕು. ಹಾಸನ ನಗರದಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಿಸಲು ನಗರಸಭೆ ಈಗಾಗಲೇ ಹಣ ಬಿಡುಗಡೆ ಮಾಡಿದ್ದು, ಆರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಈ ಭವನದ ನಿರ್ಮಾಣ ಸಂಬಂಧ ಜಿಲ್ಲಾಡಳಿತ ಕೂಡಲೇ ಸೂಕ್ತ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.
1983ರಿಂದ ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದ ಎಚ್.ಎಂ.ಪುಟ್ಟಲಕ್ಷ್ಮಿ, ರಾಜು, ಕಾಳಾಚಾರಿ, ಮಂಜುನಾಥ್, ಮಾರಪ್ಪನವರು 140 ಜನರನ್ನು ಕಾಯಂಗೊಳಿಸುವಾಗ ಕಾರ್ಯ ವೈಫಲ್ಯದಿಂದ ಈ 5 ಮಂದಿಯನ್ನು ಕೈಬಿಟ್ಟಿದ್ದು, ಇವರನ್ನು ಕಾಯಂಗೋಳಿಸಬೇಕು. ಪರಿಶಿಷ್ಟ ಕಾಲೋನಿಗಳಿಗೆ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಅರಕಲಗೂಡು ತಾಲೂಕಿನ ಗಂಗೂರು ಗ್ರಾಮದ ಪರಿಶಿಷ್ಟ ಜಾತಿಯ 30 ವರ್ಷಗಳಿಂದ ಶೋಷಣೆಯಲ್ಲಿ ಬದುಕುತ್ತಿರುವ ಗಂಗೂರು ಜೀತಾ ವಿಮುಕ್ತರಿಗೆ ಪುನರ್ವಸತಿ ಕಲ್ಪಿಸಿ, ಜಮೀನು ನೀಡಬೇಕು ಎಂದು ಒತ್ತಾಯಿಸಿದರು.
ಆಲೂರು ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿದ್ದು, ಸಂಬಂಧಿಸಿದವರ ಮೇಲೆ ಮೂರು ಬಾರಿ ಮೊಕದ್ದಮೆ ದಾಖಲಾಗಿದ್ದರೂ ಪದೇ ಪದೇ ಕಲ್ಲು ಗಣಿಗಾರಿಕೆ ಮಾಡಲು ಮಹೇಶ್ ಎಂಬುವರಿಗೆ ಅವಕಾಶ ಮಾಡಿಕೊಟ್ಟಿರುವ ಗಣಿ ಇಲಾಖೆಯ ಹಿರಿಯ ವಿಜ್ಞಾನಿಯನ್ನು ಕೂಡಲೇ ವರ್ಗಾಹಿಸುವಂತೆ ಆಗ್ರಹಿಸಿದರು.
ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಟಿ.ಆರ್.ವಿಜಯಕುಮಾರ್, ಕಾರ್ಯದರ್ಶಿ ಮುನಿಸ್ವಾಮಿ, ರವೀಶ್, ದಾಸಪ್ಪ ಚಿಕ್ಕಬ್ಯಾಡಿಗೆರೆ, ದೊರೆಬಾಬು, ಚಂದ್ರು, ಹೊಳೆನರಸೀಪುರದ ರಘುರಾಮ್, ಕುಮಾರ್, ಕೆ.ಎಂ.ನಾಗರಾಜು, ವಕೀಲ ಕೃಷ್ಣಮೂರ್ತಿ ಅರಸೀಕೆರೆ ಮಧು, ಕಬ್ಬಳಿ ಸತೀಶ ಹಾಗೂ ಇತರರು ಇದ್ದರು.