ಆನೆ ವಾಸಸ್ಥಾನ ಗುರ್ತಿಸಲು ನ್ಯಾಯಾಲಯ ಆದೇಶ
ಬೆಂಗಳೂರು: ರಾಜ್ಯದಲ್ಲಿನ ಎಲ್ಲಾ ಆನೆಗಳ ವಾಸಸ್ಥಾನ ಹಾಗೂ ಕಾರಿಡಾರ್ಗಳನ್ನು ಎರಡು ತಿಂಗಳಲ್ಲಿ ಮರು ಗುರುತಿಸಬೇಕು ಎಂದು ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಕಳೆದ ಐದು ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದ ಆನೆಗಳ ಸಂರಕ್ಷಣೆ ಕುರಿತ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಗೊಳಿಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಆನೆಗಳ ಸಂರಕ್ಷಣಾ ಕಾರ್ಯಪಡೆ, ಆನೆಗಳ ವಾಸಸ್ಥಳ ಯೋಜನೆ ಹಾಗೂ ಮೈಸೂರು ಆನೆ ಯೋಜನೆಗಳಲ್ಲಿ ಉಲ್ಲೇಖಿಸಿರಲಾಗಿರುವ ಪ್ರದೇಶಗಳನ್ನು ಪರಿಶೀಲಿಸಿ ಮರುಗುರುತಿಸಬೇಕು ಎಂದು ಆದೇಶಿಸಿದೆ.
ನಿರ್ದೇಶನಗಳೇನು?: ಈ ಪ್ರದೇಶಗಳಲ್ಲಿ ನಡೆಯುತ್ತಿರುವ ಎಲ್ಲಾ ಯೋಜನೆಗಳನ್ನು ಮರುಪರಿಶೀಲನೆಗೆ ಒಳಪಡಿಸಬೇಕು. ಯಾವುದೇ ಯೋಜನೆಗಳು ಕಾನೂನುಬಾಹಿರವಾಗಿದ್ದಲ್ಲಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಆನೆಗಳ ಕಾರಿಡಾರ್ ಅರಣ್ಯ ಭೂಮಿಯನ್ನು ಹಾದು ಹೋಗುತ್ತಿದ್ದಲ್ಲಿ ಅದನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯ ಗಮನಕ್ಕೆ ತರಬೇಕು. ಈ ಪ್ರದೇಶದಲ್ಲಿ ಯಾವುದೇ ಯೋಜನೆಗೆ ಅನುಮತಿ ನೀಡುವ ಮುನ್ನ ಅದರ ಪರಿಣಾಮಗಳ ಕುರಿತು ಪರಿಶೀಲನೆ ನಡೆಸಬೇಕು.ಬಂಧಿಸಲ್ಪಟ್ಟ ಆನೆಗಳ ಸಂರಕ್ಷಣೆಗೆ ಸರ್ಕಾರ ಸೂಕ್ತ ಹಾಗೂ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು. ಆನೆಗಳಿಗೆ ಮಾವುತರಿಂದ ಸೂಕ್ತ ತರಬೇತಿ ನೀಡಬೇಕು. ಆಗತ್ಯವಿದ್ದಾಗ ತಪಾಸಣೆಗೆ ಪಶು ವೈದ್ಯರನ್ನು ನೇಮಿಸಬೇಕು. ಈ ಸಂಬಂಧ ಅಗತ್ಯಬಿದ್ದಲ್ಲಿ ಸರ್ಕಾರ ಕಾರ್ಯಪಡೆಯ ಸಲಹೆ ಪಡೆಯಬಹುದು. ಸಕಲೇಶಪುರ ಹಾಗೂ ಆಲೂರು ಭಾಗದಲ್ಲಿ ಆನೆಗಳ ಹಾವಳಿ ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಆ ಪ್ರದೇಶದಲ್ಲಿ ಬೆಳೆಯುವ ಕಾಫಿ ಬೆಳೆಯ ಸಂರಕ್ಷಣೆಗೆ ಅಳವಡಿಸುವ ತಂತಿ ಬೇಲಿಯಿಂದ ಆನೆಗಳಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿದೆ.ಈ ಸಂಬಂಧ ಸೂಕ್ತ ಕ್ರಿಯಾ ಯೋಜನೆ ರೂಪಿಸಿ ಇತರ ಅರಣ್ಯ ಇಲಾಖೆಗಳಿಗೆ ಕೂಡ ಮಾಹಿತಿ ನೀಡಬೇಕು.ಆನೆ ಕಾರಿಡಾರ್ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿಗಳನ್ನು ಕನಿಷ್ಠ 20 ಅಡಿ ಎತ್ತರದಲ್ಲಿರುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಪೀಠ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದೆ.