'ಉನ್ನತ ವ್ಯಾಸಂಗಕ್ಕೆ ಎಸ್ಬಿಎಂನಿಂದ ಆರ್ಥಿಕ ಸಹಾಯ'
ಹಾಸನ: ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಬ್ಯಾಂಕಿನಿಂದ ಆರ್ಥಿಕ ಸಹಕಾರ ನೀಡಲಾಗುವುದು ಎಂದು ಎಸ್ಬಿಎಂ ವ್ಯವಸ್ಥಾಪಕ ನಾರಾಯಣ ತಿಳಿಸಿದರು. ಪಟ್ಟಣದ ಕಲಿವೀರ್ ವಸತಿ ಪ್ರೌಢ ಶಾಲೆಯಲ್ಲಿ ಎಸ್ಬಿಎಂ ಶಾಖೆ, ಚೇತನ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಮತ್ತು ಎಸ್ಬಿಎಂ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು,ಪ್ರತಿಯೊಬ್ಬರೂ ಶಿಕ್ಷಣ ಕಲಿಯ ಬೇಕೆಂಬುದು ಗಾಂಧೀಜಿ ಆಸೆಯಾಗಿತ್ತು. ಶಿಕ್ಷಣ ಸಮಾಜದ ಅಭಿವೃದ್ಧಿಗೆ ಕಾರಣವಾಗುತ್ತದೆ. ಆರ್ಥಿಕ ದುರ್ಬಲತೆಯಿಂದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತ ರಾಗುತ್ತಿದ್ದಾರೆ ಎಂದು ಹೇಳಿದರು.ಉನ್ನತ ಶಿಕ್ಷಣ ಬಯಸುವ ಸ್ವದೇಶ ಹಾಗೂ ವಿದೇಶದಲ್ಲಿ ವ್ಯಾಸಂಗ ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಸ್ಬಿಎಂನಿಂದ ಆರ್ಥಿಕ ಸಹಕಾರ ನೀಡಲಾಗುವುದು. ಈಗಾಗಲೇ ನಮ್ಮ ಬ್ಯಾಂಕಿನಲ್ಲಿ ಸುಮಾರು 20 ವಿದ್ಯಾರ್ಥಿಗಳಿಗೆ 35 ಲಕ್ಷ ರು. ವರೆಗೆ ಸಾಲ ನೀಡಲಾಗಿದೆ. ಎಸ್ಬಿಎಂ ಪ್ರಾರಂಭವಾಗಿ 2013 ಕ್ಕೆ ನೂರು ವರ್ಷವಾಗಿರುವ ಈ ಸಂದರ್ಭದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿನಿ ದೀಪ್ತಿ, ವರ್ಷಿತ ಮತ್ತು ಲಾವಣ್ಯ ಗಾಂಧೀಜಿ, ಕಸ್ತೂರಬಾ ಮತ್ತು ಶಾಸ್ತ್ರೀ ಅವರ ಬಗ್ಗೆ ಮಾತನಾಡಿದರು. ಸಾಮೂಹಿಕ ಗೀತೆ ಪಠಿಸಲಾಯಿತು. ಇದೇ ವೇಳೆ ಶಾಲೆಯಿಂದ ವಿಭಾಗ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಖೋ ಖೋ ತಂಡದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 10 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ಚೇತನ ಬಳಗದಿಂದ ನೆನಪಿನ ಕಾಣಿಕೆ ನೀಡಲಾಯಿತು.
ಮುಖ್ಯ ಶಿಕ್ಷಕ ಜಗನ್ನಾಥ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಗುಲಾಂ ಸತ್ತಾರ್, ಎಸ್ಬಿಎಂ ಶಾಖೆ ಮುಖ್ಯ ಹಣಕಾಸು ಶಾಖೆ ಬಟವಾಡೆ ಅಧಿಕಾರಿ ಕೆಂಪೇಗೌಡ, ಶಿಕ್ಷಕ ಸನಂತೇ ಗೌಡ, ಲೋಕೇಶ್ವರಪ್ಪ, ರಾಜು ಇತರರು ಇದ್ದರು.
ಬಿಜೆಪಿ ಬೂತ್ ಮಟ್ಟದ ಸಮಾವೇಶ
ಹಾಸನ: ಬಿಜೆಪಿ ನಗರ ಮತ್ತು ಗ್ರಾಮಂತರ ಮಂಡಲ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಸೋಮವಾರ ನಡೆಯಿತು. ನಗರದಲ್ಲಿ ನಡೆದ ಸಮಾವೇಶವನ್ನು ಮುಂಬರುವ ಲೋಕಸಭಾ ಚುನಾವಣೆಯ ಜಿಲ್ಲೆಯ ಉಸ್ತುವಾರಿ ವಹಿಸಿರುವ ಅಶ್ವತ್ಥನಾರಾಯಣ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದ 28 ಕ್ಷೇತ್ರಗಲ್ಲಿ ಪಕ್ಷದ ಅಭ್ಯರ್ಥಿಗಳು ಲೋಕಾಸಭಾ ಚುನಾವಣೆಯಲ್ಲಿ ಜಯಗಳಿಸುವಲ್ಲಿ ಶ್ರಮವಹಿಸಬೇಕು ಎಂದ ಅವರು, ದೇಶದಲ್ಲಿನ ಅವ್ಯವಸ್ಥೆಯನ್ನು ಕಂಡಾಗ ಮುಂದೆ ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕಾದಂತಹ ಅನಿವಾರ್ಯ ಹೆಚ್ಚಾಗಿದೆ ಎಂದರು. ದೇಶದ ಗಡಿಯಲ್ಲಿ ಸೈನಿಕರ ಸ್ಥಿತಿಯು ಶೋಚನೀಯವಾಗಿದ್ದು, ಪಾಕಿಸ್ತಾನಿಗಳು ಯೋಧರ ತಲೆ ಕತ್ತರಿಸಿ ಎಸೆಯುತ್ತಿದ್ದಾರೆ. ಇದರಿಂದ ದೇಶದ ಭದ್ರತೆಗೆ ಧಕ್ಕೆ ಉಂಟಾಗುತ್ತಿದೆ. ಮೋದಿ ಈ ಬಾರಿ ಪ್ರಧಾನಿ ಆಗಲು ಜಿಲ್ಲಾ ಮಂಡಲ ಮತ್ತು ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕಾಗಿದೆ ಎಂದರು. ಯುಪಿಎ ಸರ್ಕಾರದ ಬೆಲೆ ಏರಿಕೆಯ ನೀತಿಯಿಂದ ಸಾಮಾನ್ಯ ಜನರಿಗೆ ತೊಂದರೆ ಉಂಟಾಗುತ್ತಿದೆ. ಜನರಿಗೆ ದಿನ ನಿತ್ಯ ಬಳಕೆಗೆ ಅಡುಗೆ ಅನಿಲ ಲಭ್ಯವಾಗುತ್ತಿಲ್ಲ ಎಂದ ಅವರು, ದೇಶದ ಪರಿಸ್ಥಿತಿ ದುಸ್ಥಿತಿಗೆ ಬಂದಿರುವುದರಿಂದ ಜನತೆ ಈ ಬಾರಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು. ಜಿಲ್ಲಾಧ್ಯಕ್ಷ ರೇಣುಕುಮಾರ್, ನವಿಲೆ ಅಣ್ಣಪ್ಪ, ಕೃಷ್ಣೇಗೌಡ, ಪ್ರಸನ್ನಕುಮಾರ್, ಶ್ರೀನಿವಾಸ್ ಇದ್ದರು.
'ಗ್ರಾಮೀಣ ಪರಂಪರೆ ಉಳಿಯಲಿ'
ಹಾಸನ: ಗ್ರಾಮೀಣ ಪರಂಪರೆ ಉಳಿಸಿ ಬೆಳೆಸುವ ಕೆಲಸವು ವಿದ್ಯಾರ್ಥಿಗಳಿಂದ ಆಗ ಬೇಕಿದೆ ಎಂದು ಗೊರೂರು ಎ.ಎನ್.ವಿ. ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಆರ್.ಚಂದ್ರಶೇಖರ್ ತಿಳಿಸಿದರು.
ಗೊರೂರಿನ ಎ.ಎನ್.ವಿ. ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪಾರಂಪರಿಕ ಕ್ರೀಡಾ ಕೂಟದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪಾರಂಪರಿಕ ಕ್ರೀಡೆಗಳಲ್ಲಿ ತೊಡಗುವುದರಿಂದ ದೇಹ ಸದೃಢಗೊಳ್ಳುತ್ತದೆ ಎಂದರು.