ಗೌಡರ ಊರಲ್ಲಿ ದೊರೆಯ 'ದರ್ಶನ'!
ಹಾಸನ: ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ ಮುಂದಿನ ಟಾರ್ಗೆಟ್ ಹಾಸನ ಎಂಬ ಹೇಳಿಕೆಗೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ ಹಾಸನದಲ್ಲಿ ಮಂಗಳವಾರ ಒಂದೇ ದಿನ ಜನತಾ ದರ್ಶನ, ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಪ್ರಗತಿ ಪರಿಶೀಲನೆ ನಡೆಸಿದರು.
ಜನತಾ ದರ್ಶನ ಆರಂಭವಾಗುವುದಕ್ಕೂ ಮೊದಲು ಮಾತನಾಡಿದ ಸಿದ್ದರಾಮಯ್ಯ, ಹಾಸನ ಜಿಲ್ಲೆ ಅಭಿವೃದ್ಧಿ ಆಗಿಲ್ಲ ಎಂಬುದಕ್ಕೆ ನಾನು ಕಾರಣನಲ್ಲ. ದೇವೇಗೌಡರೇ ಬಹಳ ಹಿಂದಿನಿಂದಲೂ ಅಧಿಕಾರದಲ್ಲಿದ್ದರು ಎಂದು ಹೇಳುವ ಮೂಲಕ ಪರೋಕ್ಷವಾಗಿ ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದರು. ಗುಲ್ಬರ್ಗ ಮತ್ತಿತರ ಜಿಲ್ಲೆಗಳಲ್ಲಿ ಜನತಾ ದರ್ಶನ, ಪ್ರಗತಿ ಪರಿಶೀಲನಾ ನಡೆಸಿದ ವೇಳೆ ಹಾಸನದಂತೆ ಬೃಹತ್ ಕಾರ್ಯಕರ್ತರ ಬಹಿರಂಗ ಸಭೆಯನ್ನು ನಡೆಸಿರಲಿಲ್ಲ.
ಅಲ್ಲದೇ ಜಿಲ್ಲಾ ಪಂಚಾಯ್ತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಹಾಸನ ಜಿಲ್ಲೆಯಲ್ಲಿ ನಷ್ಟವಾಗಿರುವ ಆಲೂಗಡ್ಡೆ ಮತ್ತು ತೆಂಗು ಬೆಳೆಗೆ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆಸಿ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡುವ ಮೂಲಕ ವಿಶೇಷ ಕಾಳದಿ ವಹಿಸಿದರು. ಇದರ ಹಿಂದೆ ಮುಂದಿನ ಚುನಾವಣೆಯಲ್ಲಿ ಜೆಡಿಸ್ ಭದ್ರಕೋಟೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ರಾಜಕೀಯ ಹುನ್ನಾರ ಅಡಗಿದೆ ಎಂದೇ ಹೇಳಲಾಗುತ್ತಿದೆ.
ಹಾಸನದ ಬಹಿರಂಗ ಸಭೆಯಲ್ಲಿ ದುರಾದೃಷ್ಟವಶಾತ್ ಮುಖ್ಯಮಂತ್ರಿಗಳು ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ. ಕಾರಣ ಹಠಾತ್ ಮಳೆ ಬಂದ ಕಾರಣ ಕೇವಲ ಒಂದೂವರೆ ನಿಮಿಷ ಮಾತನಾಡಿದರು. ಇದರಿಂದ ಅಸಮಾಧಾನಗೊಂಡಂತೆ ಕಂಡ ಸಿದ್ದರಾಮಯ್ಯ, ಜಿಪಂನಲ್ಲಿ ಮತನಾಡುತ್ತಾ, ಇದು ರಾಜಕೀಯ ಮಾತನಾಡುವ ವೇದಿಕೆಯಲ್ಲ. ರಾಜಕೀಯ ಮಾತನಾಡಲು ಎಂದೇ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಳೆ ಬಂದ ಕಾರಣ ಮಾತನಾಡಲಾಗಲಿಲ್ಲ ಎಂದು ತಮ್ಮಷ್ಟಕ್ಕೆ ತಾವೇ ವಿಷಾದ ವ್ಯಕ್ತಪಡಿಸಿಕೊಂಡಿದ್ದರು. ಆ ಮಾತಿನರ್ಥ ಮಾಜಿ ಪ್ರಧಾನಿ ದೇವೇಗೌಡ, ಎಚ್.ಡಿ.ರೇವಣ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಬೇಕಾಗಿತ್ತು ಎಂಬುದೇ ಆಗಿತ್ತು ಎಂದು ಕಾಂಗ್ರೆಸ್ ವಲಯದಲ್ಲಿ ಹೇಳುವ ಮಾತು.
ಜನತಾ ದರ್ಶನದಲ್ಲಿ ಜನರ ಸಮಸ್ಯೆ ಸುಲಲಿತವಾಗಿ ಆಲಿಸುವ ಮೂಲಕ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲೂ ಜಿಲ್ಲೆಯ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸಿ, ಜನರ ಮನಸೆಳೆಯುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದರು. ಆದರೆ ಇವು ಕೂಡ ನಿರೀಕ್ಷಿತ ಪ್ರಮಾಣದ ಸಫಲವಾಗಲಿಲ್ಲ. ವ್ಯವಸ್ಥಿತವಾಗಿ ಮಾಡಲಿಲ್ಲ.
ಕಾಂಗ್ರೆಸ್ ಮುಖಂಡರು ಮತ್ತು ವಿವಿಧ ಸಂಘಟನೆಗಳ ಮುಖಂಡರು, ಜನತಾ ದರ್ಶನ ನಡೆಯುತ್ತಿದ್ದ ವೇಳೆ ಸಿದ್ದರಾಮಯ್ಯ ಅವರಿಗೆ ಹಾರ, ತುರಾಯಿ ಹಾಕಿ, ಬೊಕ್ಕೆ ಕೊಡುವ ಮೂಲಕ ಗೌರವ ಸಲ್ಲಿಸುವುದೇ ಮೇಲುಗೈ ಸಾಧಿಸಿತು. ಇದರಿಂದ ವೃದ್ಧರು, ಅಂಗವಿಕಲರ ಬಳಿ ನಾಡಿನ ದೊರೆ ಬರಲೇ ಇಲ್ಲ. ಗಂಟೆಗಟ್ಟಲೇ ನೆಲದಲ್ಲೇ ಅಂಗವಿಕಲರು ಕುಳಿತು ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ ಹೋದರು.
ಹಾಸನ ಟಾರ್ಗೆಟ್ ಮಾಡಲು ಸಾಧ್ಯವೇ?: ಇದೇ ಕಾಲಕ್ಕೆ ಹಾಸನ ಜಿಲ್ಲೆ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಸ್ಪರ್ಧಿಸುವುದು ಖಚಿತವಾಗಿದೆ. ಆದರೆ ಕಾಂಗ್ರೆಸ್ನಲ್ಲಿ ಗೌಡರ ವಿರುದ್ಧ ಸಮರ್ಥವಾಗಿ ಸೆಣಸುವ ಅಭ್ಯರ್ಥಿ ಸದ್ಯದ ಪರಿಸ್ಥಿತಿಯಲ್ಲಿ ಕಾಣುತ್ತಿಲ್ಲ. ಇದು ರಾಜ್ಯಮಟ್ಟದ ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಾಮಿಸಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ದಯಾಶಂಕರ ಮೈಲಿ