ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲಾ ಕಾಂಗ್ರೆಸ್ ಸಭೆಗೆ ವರುಣ ಅಡ್ಡಿ

Rashmi Kasaragodu
Updated On : 8 Oct 2013, 11:08 am

ಹಾಸನ: ಧಾರಾಕಾರವಾಗಿ ಸುರಿದ ಮಳೆಯು ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಅಡ್ಡಿಯುಂಟಾದ ಪರಿಣಾಮ, ಕೇವಲ 15 ನಿಮಿಷದಲ್ಲೇ ವೇದಿಕೆ ಕಾರ್ಯಕ್ರಮ ಮುಗಿಯಿತು.
ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯು ವರುಣನ ಆರ್ಭಟಕ್ಕೆ ನಲುಗಿ ಹೋಯಿತು. ಸುರಿದ ಭಾರೀ ಮಳೆಗೆ ವೇದಿಕೆ ತೊಪ್ಪೆಯಾದರೆ, ಮಳೆಯಿಂದ ರಕ್ಷಿಸಿಕೊಳ್ಳಲು ಜನರು ಛೇರ್ಗಳ ಮೊರೆ ಹೋದರು.
ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ್ದರಿಂದ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿತ್ತು.
ಕಾರ್ಯಕರ್ತರ ಸಭೆ ಪ್ರಾರಂಭವಾಗಿ ಸ್ವಾಗತ ಭಾಷಣ ಮುಗಿದ ನಂತರ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯಮಂತ್ರಿಗಳು ಮಾತನಾಡಲು ಏಳುತ್ತಿದ್ದಂತೆ ಭಾರೀ ಮಳೆ ಪ್ರಾರಂಭವಾಗಿ ವೇದಿಕೆ ಸಂಪೂರ್ಣವಾಗಿ ಒದ್ದೆಯಾಯಿತು.
ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡೆ ಆಶ್ರಯಿಸಿ ಮಳೆಯ ನಡುವೇ ತಮ್ಮ ಒಂದರೆಡು ಮಾತುಗಳನ್ನಾಡಿದರು. ಆದರೆ ವೇದಿಕೆ ಮುಂದಿದ್ದ ಕಾರ್ಯಕರ್ತರು ಮಳೆಯಿಂದ ರಕ್ಷಿಶಿಸಿಕೊಳ್ಳಲು ಸಭಾಂಗಣದಿಂದ ಹೊರ ಓಡಿದರು. ಮತ್ತೆ ಕೆಲವರು ತಾವು ಕುಳಿತಿದ್ದಂತಹ ಛೇರ್ಗಳನ್ನು ಮೇಲೆತ್ತಿಕೊಂಡು ಮಳೆಯಿಂದ ರಕ್ಷಿಸಿಕೊಂಡರು. ಈ ನಿಟ್ಟಿನಲ್ಲಿ ಬೇಗನೆ ಮಾತು ಮುಗಿಸಿ ಕಾರನ್ನೇರಿ ಹೊರಟು ಹೋದರು.  
ಸಿಎಂ ನುಡಿ: ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಸಿಎಂ, ಜಿಲ್ಲೆಯ ಜನರ ಸಮಸ್ಯೆಗಳು ಹಾಗೂ ನೆನೆಗುದಿಗೆ ಬಿದ್ದಿರುವಂತಹ ನಾನಾ ಯೋಜನಗೆಳನ್ನು ಸಾಕಾರಗೊಳಿಸುವುದಾಗಿ ಭರವಸೆ ನೀಡಿದರು. ಜೆಡಿಎಸ್ ಭದ್ರಕೋಟೆಯಾಗಿರುವ ಜಿಲ್ಲೆಯಲ್ಲಿ ಕಾಂಗ್ರೆಸ್ ಅಲೆ ಎದ್ದಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಪಕ್ಷಕ್ಕೆ ದೊಡ್ಡಶಕ್ತಿ ತುಂಬಬೇಕು ಎಂದರು.
ಸಮಸ್ಯೆ ಬಗೆಹರಿಸಲಿದ್ದಾರೆ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ ಮಾತನಾಡಿ, ಚಾಮರಾಜನಗರಕ್ಕೆ ಭೇಟಿ ನೀಡಿ ಶಾಪ ಮುಕ್ತಗೊಳಿಸಿದಂತೆ ಜಿಲ್ಲೆಗೆ ಭೇಟಿ ನೀಡುವ ಮೂಲಕ ಸಿಎಂ ಅವರು ದ್ವೇಷ ಮುಕ್ತಗೊಳಿಸಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ. ಇಷ್ಟು ವರ್ಷಗಳ ಕಾಲ ಜೆಡಿಎಸ್ ಆಳ್ವಿಕೆಯಿಂದ ಎಷ್ಟು ಸಮಸ್ಯೆಗಳು ಪರಿಹಾರಗೊಂಡಿದೆ ಎಂಬ ಸತ್ಯಾಂಶ ಜನತಾ ದರ್ಶನದಲ್ಲಿ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವರಿಕೆಯಾಗಿದೆ ಎಂದ ಅವರು, ಕೇವಲ ಮಣ್ಣಿನ ಮಗ ಹಾಗೂ ರೈತರ ಹೆಸರನ್ನು ಹೇಳಿಕೊಂಡು ವಂಚಿಸಿದ್ದಾರೆ ಎಂದು ಅವರು ಈ ಸಂದರ್ಭದಲ್ಲಲ್ಲಿ ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement