'ಪಠ್ಯೇತರ ಚಟುವಟಿಕೆಗೆ ಎನ್ಎಸ್ಎಸ್ ಸ್ಫೂರ್ತಿ'
ಅರಸೀಕೆರೆ: ಗ್ರಾಮೀಣ ನೈರ್ಮಲ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆಸಲು ವಿದ್ಯಾರ್ಥಿಗಳು ಹೆಚ್ಚಿನ ಉತ್ಸುಕರಾಗಬೇಕೆಂದು ಕನ್ನಡ ಉಪನ್ಯಾಸಕ ಸಂಕೋಡನಹಳ್ಳಿ ಶೇಖರ್ ಕಿವಿಮಾತು ಹೇಳಿದರು.
ತಾಲೂಕಿನ ಜ್ಯೋತಿಮಲ್ಲಾಪುರ ಗ್ರಾಮದಲ್ಲಿ ಪಟ್ಟಣದ ಪ್ರತಿಭಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ-
ವಿದ್ಯಾರ್ಥಿನಿಯರಿಗೆ ಇತ್ತೀಚೆಗೆ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಠ್ಯೇತರ ಚಟುವಟಿಕೆಗಳಾದ ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳನ್ನು ಪ್ರತಿ ವರ್ಷವು ಆಯೋಜಿಸಲಾಗುತ್ತಿದೆ. ಈ ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸೇವಾ ಮನೋಭಾವನೆಯಿಂದ ಗ್ರಾಮದ ಸ್ವಚ್ಛತೆ ಬಗ್ಗೆ ಸಕ್ರಿಯವಾಗಿ ಪಾಲ್ಗೊಂಡು ಗ್ರಾಮಸ್ಥರಿಗೆ ಆರಿವು ಮೂಡಿಸಬೇಕಾಗಿದೆ ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.
ಪ್ರತಿಭಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಚಂದ್ರಶೇಖರಯ್ಯ ಮಾತನಾಡಿ, ತಾಲೂಕಿನ ಗ್ರಾಮೀಣಾ ಪ್ರದೇಶದಲ್ಲಿ ಶಿಬಿರ ಏರ್ಪಡಿಸುವ ಮೂಲಕ ಅಲ್ಲಿನ ಜನರ ಬದುಕು, ಬವಣೆಗಳ ಬಗ್ಗೆ ಪರಿಚಯ ಮಾಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಶ್ರಮದಾನದ ಮೂಲಕ ಅರಿವು: ಗ್ರಾಮದ ನೈರ್ಮಲ್ಯ ಕಾಪಾಡುವ ಜೊತೆಗೆ ಪರಿಶುದ್ದ ಆಮ್ಲಜನಕ ನೀಡುವ ಗ್ರಾಮದಲ್ಲಿನ ಅರಳೀಕಟ್ಟೆಯನ್ನು ವಿದ್ಯಾರ್ಥಿಗಳ ಶ್ರಮದಾನದ ಮೂಲಕ ಅಭಿವೃದ್ಧಿ ಪಡಿಸಲಾಗುವುದು ಎಂದರು. ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಕಂಡಿದ್ದ ಮಹಾತ್ಮ ಗಾಂಧೀಜಿ ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಇಲ್ಲಿನ ಜನರ ಆರೋಗ್ಯ ಮತ್ತು ಜೀವನ ಮಟ್ಟ ಸುಧಾರಿಸುವಲ್ಲಿ ಈ ಶಿಬಿರವು ತಮ್ಮದೇ ಆದ ಮಹತ್ವ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಪಿ.ಶಾಂತಕುಮಾರ್ ಧ್ವಜಾರೋಹಣ ನೆರವೇರಿಸಿದರು. ಕಾಲೇಜು ಉಪನ್ಯಾಸಕರು ಮತ್ತು ಗ್ರಾಮಸ್ಥರಾದ ಮಲ್ಲಿಕಾರ್ಜುನ ರಾಮಣ್ಣ, ಆನಂದಪ್ಪ, ಶಂಕರಪ್ಪ, ಶಿವಾನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.