'ಶಾಸನ ಇದ್ದರೂ ಮಹಿಳೆ ಮೇಲಿನ ದೌರ್ಜನ್ಯ ನಿಂತಿಲ್ಲ'
ಹಾಸನ: ದೇಶದಲ್ಲಿ ಸ್ವಾತಂತ್ರ್ಯ ನಂತರ ಮಹಿಳೆಯರ ಸಂರಕ್ಷಣೆ ಮತ್ತು ಸಬಲೀಕರಣಕ್ಕಾಗಿ ಸಾವಿರಾರು ಶಾಸನಗಳು ರಚನೆಯಾಗಿದ್ದರೂ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ ಎಂದು ಹಾಸನಾಂಬ ಬಿಎಡ್ ಕಾಲೇಜು ಪ್ರಾಂಶುಪಾಲೆ ಡಾ.ಗೀತಾ ವಿಷಾದವ್ಯಕ್ತಪಡಿಸಿದರು. ನಗರದ ಹಾಸನಾಂಬ ಬಿಎಡ್ ಕಾಲೇಜಿನಲ್ಲಿ ಎಂ.ಕೃಷ್ಣ ಕಾನೂನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಮಹಿಳೆ ಮತ್ತು ಕಾನೂನು ಎಂಬ ವಿಷಯದ ಮೇಲೆ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಂ.ಕೃಷ್ಣ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿ. ಶ್ರೀನಿವಾಸ್ ಮಾತನಾಡಿ, ಕಾನೂನುಗಳನ್ನು ರಚಿಸುವ ಮೂಲ ಉದ್ದೇಶ ದೌರ್ಜನ್ಯ ತಡೆ ಹಿಡಿಯುವ ಸರ್ವರಿಗೂ ಸಮಾನ ಹಕ್ಕುಗಳನ್ನು ಒದಗಿಸುವುದಾಗಿದ್ದು, ಮಹಿಳೆಯರು ಮಹಿಳೆಯ ಸಂರಕ್ಷಣೆಗಳಿಗೆ ಇರುವ ಕಾನೂನುಗಳನ್ನು ತಿಳಿದುಕೊಂಡು ಅವುಗಳಿಂದ ರಕ್ಷಣೆ ಮತ್ತು ಸ್ವಾವಲಂಬನೆ ಪಡೆಯಬೇಕೆಂದರು.
ಹಾಸನಾಂಬ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ರವೀಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಎಂ.ಕೃಷ್ಣ ಕಾನೂನು ಕಾಲೇಜಿನ ಉಪನ್ಯಾಸಕಿ ಉಷಾ ಮಹಿಳಾ ದೌರ್ಜನ್ಯ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.