ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಿದ್ದರಾಮಯ್ಯಗೆ ಭರ್ಜರಿ ಸ್ವಾಗತ

Rashmi Kasaragodu
Updated On : 8 Oct 2013, 11:11 am

ಕ.ಪ್ರ. ವಾರ್ತೆ ಹೊಳೆನರಸೀಪುರ ಅ.8
ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೈಸೂರು ರಸ್ತೆ ಮಾರ್ಗವಾಗಿ ಹಾಸನಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು  ಹಾಗೂ ಕಾರ್ಯಕರ್ತರು ಸ್ವಾಗತಿಸಿದರು
ಉಪ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಚುನಾವಣಾ ಪ್ರಚಾರದ ಸಂದರ್ಭ. ಹೀಗೆ ಹತ್ತು ಹಲವು ಬಾರಿ ಪಟ್ಟಣಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರೂ, ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿದಾಗ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಿದ್ದರಾಮಯ್ಯಗೆ ಪ್ರೀತಿ ಪೂರ್ವಕ ಸ್ವಾಗತ ನೀಡಿದರು.
ಅಲ್ಲಲ್ಲಿ ಸ್ವಾಗತ: ಮೈಸೂರು ರಸ್ತೆ ಮಾರ್ಗವಾಗಿ ಹಾಸನಕ್ಕೆ ತೆರಳುವ ಮಾರ್ಗ ಮದ್ಯದಲ್ಲಿ ತಾಲೂಕಿನ ಗಡಿ ಭಾಗವಾದ ದೊಡ್ಡಹಳ್ಳಿ, ದಾಳಗೌಡನಹಳ್ಳಿ, ದೊಡ್ಡಕಾಡನೂರು ಹಾಗೂ ಪಟ್ಟಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಮುಖ್ಯಮಂತ್ರಿಗಳ ರಕ್ಷಣಾ ಪಡೆಯನ್ನೂ ಲೆಕ್ಕಿಸದೆ, ತಮ್ಮ ನೆಚ್ಚಿನ ನಾಯಕನ ಕಾರನ್ನು ಅಡ್ಡಗಟ್ಟಿ ಆಳೆತ್ತರದ ರೇಷ್ಮೆ, ಹೂವು, ಗಂಧದ ಹಾರಗಳನ್ನು ಲೆಕ್ಕವಿಲ್ಲದಂತೆ ಹಾಕಿ, ಮುಖ್ಯಮಂತ್ರಿ ಕೈಕುಲುಕಿ ಜೈಕಾರ ಹಾಕಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಯಲ್ಲಿ ಅರಕಲಗೂಡು ಶಾಸಕ ಎ.ಮಂಜು, ರಾಜ್ಯಸಭೆ ಮಾಜಿ ಸದಸ್ಯ ಎಚ್.ಕೆ.ಜವರೇಗೌಡ, ಮಾಜಿ ಶಾಸಕರಾದ ಸಿ.ಎಸ್.ಪುಟ್ಟೇಗೌಡ, ಎಚ್.ಎಂ.ವಿಶ್ವನಾಥ್, ನಿವೃತ್ತ ಅಧಿಕಾರಿ ಎಸ್.ಪುಟ್ಟಸ್ವಾಮಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಮತ್ತಿತರರು ಇದ್ದರು.
ಸಿಎಂಗೆ ರೈತರ ಮನವಿ: ಮುಖ್ಯಮಂತ್ರಿ ಆಗಮನದ ಸಂದರ್ಭದಲ್ಲಿ ತಾಲೂಕಿನ ರೈತ ಸಂಘದ ಪದಾಧಿಕಾರಿಗಳು ಸೂರನಹಳ್ಳಿ ಬಳಿಯಲ್ಲಿನ ರೈತರ ಕೃಷಿ ಭೂಮಿ ಅಕ್ರಮ ಭೂಸ್ವಾಧೀನವನ್ನು ಕೈಬಿಟ್ಟು ಜಮೀನನ್ನು ಸಂತ್ರಸ್ತ ರೈತರಿಗೇ ಬಿಟ್ಟು ಕೊಡುವಂತೆ, ಪಟ್ಟಣದ ಬಸ್ನಿಲ್ದಾಣದ ಮುಂಭಾಗದಲ್ಲಿ ಆಕ್ರಮವಾಗಿ ಭೂಸ್ವಾಧೀನಪಡಿಸಿಕೊಂಡಿರುವ ನಿವೇಶನಗಳನ್ನು ಮಾಲೀಕರಿಗೆ  ಹಿಂದಿರುಗಿಸಲು ಆದೇಶ ನೀಡುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಮನವಿ  ಸಲ್ಲಿಸಲಾಯಿತು.
ಅರ್ಥ ಹೊಳೆಯಲಿಲ್ಲ: ತಾಲೂಕಿನ ಕಾಂಗ್ರೆಸ್ ಮುಖಂಡರು  ಮುಖ್ಯಮಂತ್ರಿ ಆಗಮನಕ್ಕೆ ಶುಭ ಕೋರಲು ಪಟ್ಟಣದ ಉದ್ದಗಲಕ್ಕೂ ಹಾಕಲಾಗಿದ್ದ ಫ್ಲೆಕ್ಸ್ಗಳಲ್ಲಿ  ಸಿದ್ದರಾಮಯ್ಯ ಹೆಸರನ್ನು ಎಸ್.ಎಸ್.ಸಿದ್ದರಾಮಯ್ಯ ಎಂದು ಮುದ್ರಿಸಲಾಗಿದ್ದ ಫ್ಲೆಕ್ಸ್ಗಳನ್ನು ಹಾಕಿದ್ದು ಕಂಡುಬಂದಿತಾದರೂ ಸಿದ್ದರಾಮಯ್ಯ ಹೆಸರಿನ ಮುಂದೆ ಎಸ್.ಎಸ್ ಎಂಬ ಪದದ ಅರ್ಥ ಮಾತ್ರ ಯಾರಿಗೂ ಹೊಳೆಯದೇ ಹೋಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement