ಕಾಲುಬಾಯಿ ರೋಗಕ್ಕೆ 3 ಹಸು ಸಾವು
ಅರಕಲಗೂಡು: ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು, ಕಳೆದ 4-5 ದಿನಗಳಲ್ಲಿ ಮೂರು ಹಸುಗಳು ಸಾವನ್ನಪ್ಪಿವೆ. ಇನ್ನೂ ಕೆಲವು ರಾಸುಗಳು ತೀವ್ರ ಅಸ್ವಸ್ಥಗೊಂಡಿದ್ದು ರಾಸುಗಳು ಕಾಯಿಲೆಯಿಂದ ನಿಶ್ಯಕ್ತಗೊಂಡಿವೆ. ಇದು ಇಡೀ ಗ್ರಾಮದಲ್ಲಿ ರೈತ ಸಮುದಾಯಕ್ಕೆ ಆತಂಕ ಉಂಟುಮಾಡಿದೆ.
ಬೆಳವಾಡಿ ಗ್ರಾಮದ ರಮೇಶ್ ಎಂಬುವರ ಸಿಂಧಿ ಹಸು ಮಂಗಳವಾರ ರಾತ್ರಿ ತೀವ್ರ ಅಸ್ವಸ್ಥಗೊಂಡಿದ್ದು,ಈ ಸಂಬಂಧ ಸ್ಥಳೀಯ ವೈದ್ಯರು ಚಿಕಿತ್ಸೆ ನೀಡಿದರಾದರೂ ಔಷಧಿ ಪರಿಣಾಮ ಬೀರದೇ ಹಸು ಸಾವನ್ನಪ್ಪಿದೆ.ಇದೇ ಮನೆಯಲ್ಲಿದ್ದ ಮತ್ತೊಂದು ಹಸುವಿನ ಕರುವೂ ಕಾಲುಬಾಯಿ ಜ್ವರದ ಲಕ್ಷಣಗಳಿಂದ ಕೂಡಿದ್ದು,ಬಾಯಿಯಲ್ಲಿ ನೀರ್ಗುಳ್ಳೆ ಜೊಲ್ಲು ಸುರಿಸುತ್ತಿದೆ.ಕಳೆದ ಶುಕ್ರವಾರ ಸುಂದ್ರಮ್ಮ ಎಂಬುವವರಿಗೆ ಸೇರಿದ ಹಸು ಸಾವನ್ನಪ್ಪಿದರೆ,ಬುಧವಾರ ಬೆಳಿಗ್ಗೆ ರಾಮೇಗೌಡ ಎಂಬುವವರಿಗೆ ಸೇರಿದ ಎಮ್ಮೆ ಮೃತ ಪಟ್ಟಿದೆ.
ಅದೇ ಗ್ರಾಮದ ರಘು ಎಂಬುವವರಿಗೆ ಸೇರಿದ ಸುಮಾರು 10 ಸಿಂಧಿ ಹಸುಗಳ ಪೈಕಿ ಬಹುತೇಕ ಎಲ್ಲಾ ರಾಸುಗಳೂ ಬಾಯಿಂದ ಜೊಲ್ಲು ಸುರಿಸುತ್ತಿದ್ದರೆ,ಕೆಲ ರಾಸುಗಳು ನಿಲ್ಲಲಾರದೇ ಬಳಲುತ್ತಿವೆ. ಮತ್ತೆ ಕೆಲವು ರಾಸುಗಳ ಕೆಚ್ಚಲಿನ ಮೇಲೆ ಗುಳ್ಳೆಗಳು ಕಂಡು ಬಂದಿವೆ.
ಗ್ರಾಮಕ್ಕೆ ಪತ್ರಕರ್ತರು ಬೇಟಿ ನೀಡಿದಾಗ ಗ್ರಾಮಸ್ಥರು ಕಳೆದ ಎರಡು ತಿಂಗಳುಗಳಿಂಮದಲೂ ಇಂತಹ ಲಕ್ಷಣಗಳು ಕಂಡು ಬಂದಿದ್ದು,ಲಸಿಕೆ ಹಾಕಿಸಲಾಗಿದೆ.ಆದರೂ ಈ ರೋಗ ಕಾಣಿಸಿಕೊಂಡಿದೆ.ಸ್ಥಳೀಯ ಅಧಿಕಾರಿಗಳು ಬಿಟ್ಟರೆ ಹಿರಿಯ ಅಧಿಕಾರಿಗಳಾರೂ ಬೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ದೂರಿದ್ದಾರೆ.ಸ್ಥಳೀಯ ಅಧಿಕಾರಿ ಕೊಟ್ಟ ಮಾಹಿತಿ ಪ್ರಕಾರ ಬೆಳವಾಡಿ ಪಶು ಆರೋಗ್ಯ ಚಿಕಿತ್ಸಾಲಯದ ವ್ಯಾಪ್ತಿಯಲ್ಲಿ 5300 ರಾಸುಗಳು ಇವೆ.ಅವುಗಳಲ್ಲಿ ನಾಲ್ಕು ಸಾವಿರ ರಾಸುಗಳಿಗೆ ಮುಂಜಾಗ್ರತಾ ಲಸಿಕೆ ಹಾಕಲಾಗಿದೆ.ಹದಿನೈದು ದಿನಗಳ ಹಿಂದಷ್ಟೇ 600-700 ರಾಸುಗಳಿಗೆ ಲಸಿಕೆ ಹಾಕಲಾಗಿದೆ ಎನ್ನುತ್ತಾರೆ.
ಮಾಹಿತಿ ಕೊಡಲೊಪ್ಪದ ಅಧಿಕಾರಿ- ಬೆಳವಾಡಿ ಗ್ರಾಮದಲ್ಲಿ ಹಸುಗಳು ಸಾವನ್ನಪ್ಪಿರುವ ಬಗೆಗೆ ಇಲ್ಲಿನ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ವೀರಭದ್ರಪ್ಪ ಅವರನ್ನು ಕನ್ನಡಪ್ರಭ ಪ್ರಶ್ನಿಸಿದಾಗ ಈ ಬಗೆಗೆ ತಮ್ಮ ಬಳಿಯಲ್ಲಿ ಯಾವುದೇ ಮಾಹಿತಿ ಇಲ್ಲ. ಹೆಗ್ಗಡಿಹಳ್ಳಿ ಮತ್ತು ನಿಲುವಾಗಿಲು ಕೊಪ್ಪಲುಗಳಲ್ಲಿ ಮಾತ್ರ ಕಳೆದ ವಾರದಲ್ಲಿ ರೋಗ ತಗುಲಿರುವ ಲಕ್ಷಣಗಳು ಕಂಡು ಬಂದಿತ್ತು.ತಾಲೂಕಿನ ಐದು ಗ್ರಾಮಗಳಲ್ಲಿ ಮಾತ್ರ ರಾಸುಗಳಿಗೆ ಕಾಲುಬಾಯಿ ರೋಗ ಕಾಣಿಸಿಕೊಂಡಿದೆ ಎಂದು ಹೇಳಿದರು.