ಜನಪ್ರತಿನಿಧಿಗಳ ಗಮನಕ್ಕೆ ತಾರದೇ ಕಾಮಗಾರಿ
ಕನ್ನಡಪ್ರಭ ವಾರ್ತೆ ಹಾಸನ ಅ. 9
ನಾನಾ ಯೋಜನೆಗಳ ಕಾಮಗಾರಿಗಳನ್ನು ತಮ್ಮ ಗಮನಕ್ಕೆ ತಾರದೇ ಕೈಗೆತ್ತಿಕೊಳ್ಳಲಾಗುತ್ತಿದ್ದು, ಕುಡಿಯುವ ನೀರು ಯೋಜನೆ ಅನುಷ್ಠಾನದಲ್ಲಿ ಹಿನ್ನೆಡೆ ಆಗಿದೆ. ಅಧಿಕಾರಿಗಳು ಗೈರು ಹಾಜರಾಗುತ್ತಿದ್ದಾರೆ ಎಂದು ಬುಧವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಅಲ್ಲದೇ, ರಸ್ತೆ, ಕಟ್ಟಡ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿ ವಿಳಂಬ, ಜನಪ್ರತಿನಿಧಿಗಳ ಬಗ್ಗೆ ನಿರ್ಲಕ್ಷ್ಯ, ಇ-ಸ್ವತ್ತು ಗೊಂದಲ, ಮಲೆನಾಡು ಭಾಗದಲ್ಲಿ ಕುಡಿಯುವ ನೀರು ಯೋಜನೆ ಅನುಷ್ಠಾನದಲ್ಲಿ ಹಿನ್ನೆಡೆ, ಮರಳು ಸಮಸ್ಯೆ ಸೇರಿದಂತೆ ಹಲವು ವಿಷಯಗಳು ಸಭೆಯಲ್ಲಿ ತೀವ್ರ ಚರ್ಚೆಯಾದವು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಸನ, ಅರಕಲಗೂಡು ಕೊಣನೂರು ರಸ್ತೆ ಸೇರಿದಂತೆ ಮುಖ್ಯ ಮತ್ತು ಗ್ರಾಮೀಣ ರಸ್ತೆಗಳು ದುಸ್ಥಿತಿಯಲ್ಲಿವೆ. ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗಗಳು ಈ ಬಗ್ಗೆ ಗಮನ ಹರಿಸಬೇಕು ಹಾಗೂ ಒಂದೆರಡು ವರ್ಷಗಳ ಹಿಂದೆಯೇ ಆರಂಭವಾಗಿರುವ ಕಟ್ಟಡ ಕಾಮಗಾರಿಗಳೂ ಸಹ ತ್ವರಿತವಾಗಿ ಪೂರ್ಣಗೊಳ್ಳುತ್ತಿಲ್ಲ ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಸಭೆಯಲ್ಲಿ ಸೂಚಿಸಲಾಯಿತು.
ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಗೆ ಹಲವು ಅಧಿಕಾರಿಗಳು ಗೈರುಹಾಜರಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಯಿತು. ಇನ್ನು ಮುಂದೆ ಯಾವುದೇ ಅಧಿಕಾರಿಗಳು ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ನಡೆಯುವ ದಿನಗಳಂದು ತಮ್ಮ ಸಭೆಗಳನ್ನು ಇಟ್ಟುಕೊಳ್ಳದೆ ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕೆಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ ಸಿಂಗ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸರ್ಕಾರಿ ಸಮಾರಂಭಗಳನ್ನು ನಡೆಸುವ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಕೆಲವು ಕಾಮಗಾರಿಗಳು ಪೂರ್ಣಗೊಂಡು ಉದ್ಘಾಟನೆ ನಡೆಸುವ ಸಂದರ್ಭದಲ್ಲಿ ಆಯಾಯಾ ಇಲಾಖೆಯವರು ಜವಾಬ್ದಾರಿ ವಹಿಸಿಕೊಳ್ಳುವಲ್ಲಿ ನುಣುಚಿಕೊಳ್ಳುತ್ತಿದ್ದಾರೆ ಇದರಿಂದ ಜನಪ್ರತಿನಿಧಿಗಳಿಗೆ ಅಪವಾನವಾದಂತಾಗುತ್ತದೆ ಎಂದು ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ನಂಜುಂಡಸ್ವಾಮಿ ಲಕ್ಷ್ಮಣಗೌಡ, ಮತ್ತಿತರರು ಪ್ರಸ್ತಾಪಿಸಿದರು.
ಸದಸ್ಯರಾದ ಹುಚ್ಚೇಗೌಡ, ಸ್ವಾಮಿಗೌಡ, ಚಂದ್ರೇಗೌಡ ಮತ್ತಿತರರು ಇದಕ್ಕೆ ಧ್ವನಿಗೂಡಿಸಿದರು. ಇತ್ತೀಚೆಗೆ ಮಾಜಿ ಪ್ರಧಾನಿ ದೇವೇಗೌಡರ ಕಾರ್ಯಕ್ರಮದ ವೇಳೆ ನಿರ್ಲಕ್ಷ್ಯ ವಹಿಸಿದ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸದಸ್ಯ ಸ್ವಾಮಿಗೌಡ ಮಾತನಾಡಿ, ಜಿಪಂ ಸದಸ್ಯರ ಗಮನಕ್ಕೇ ಬಾರದಂತೆ ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಕ್ರಿಯಾ ಯೋಜನೆ, ಅಂದಾಜು ಪಟ್ಟಿ ಸಿದ್ಧಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಾದರೂ ಇದು ನಿಲ್ಲಬೇಕೆಂದು ಕಳೆದೆರಡು ತಿಂಗಳಿನಿಂದ ಜಾರಿಗೆ ಬಂದಿರುವ ಈ ಸ್ವತ್ತು, ದಾಖಲಾತಿ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಜಮೀನು, ಮನೆ ನೊಂದಣಿಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಯಿತು. ಸದಸ್ಯರಾದ ಪಾಪಣ್ಣ, ಲಕ್ಷ್ಮಣ್, ಅಮಿತ್ಕುಮಾರ್ಶೆಟ್ಟಿ ಎನ್.ಡಿ.ಕಿಶೋರ್, ರಂಗಸ್ವಾಮಿ, ದೇವೇಗೌಡ ಮಲ್ಲಿಗೆವಾಳು ದೇವಪ್ಪ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು.
ಜಿಪಂ ಉಪಕಾರ್ಯದರ್ಶಿ(ಆಡಳಿತ) ಪುಟ್ಟಸ್ವಾಮಿ ಪ್ರತಿಕ್ರಿಯಿಸಿ ನ್ಯಾಯಾಲಯದ ಆದೇಶದ ಮೇರೆಗೆ ಈ ಯೋಜನೆ ಜಾರಿಗೊಳ್ಳುತ್ತಿದೆ. ಆರಂಭದಲ್ಲಿ ಸಣ್ಣಪುಟ್ಟ ಲೋಪದೋಷ ಕಂಡುಬುರುವುದು ಸಹಜ ಈ ಬಗ್ಗೆ ಈಗಾಗಲೇ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು. ಆದರೂ ತೃಪ್ತಿಯಾಗದ ಸದಸ್ಯರು ಇದರಿಂದಾಗುತ್ತಿರುವ ಗೊಂದಲಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಒಕ್ಕೊರಲ ಬೇಡಿಕೆ ಮಂಡಿಸಿದರು.
ಸಕಲೇಶಪುರ ಮತ್ತು ಆಲೂರು ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ. ಚೆಸ್ಕಾಂ ವತಿಯಿಂದ ವಿದ್ಯುತ್ ಸಂಪರ್ಕ ಒದಗಿಸುವಲ್ಲಿ ವಿಳಂಬವಾಗುತ್ತಿದೆ ಮಲೆನಾಡು ಭಾಗದ ಜನ ಪರದಾಡುವಂತಾಗಿದೆ ಎಂದು ಸದಸ್ಯರಾದ ಬೈರಮುಡಿ ಚಂದ್ರು ಜ್ಯೋತಿ ಗುರುದೇವ್, ಪುರುಷೋತ್ತಮ ಅವರು ತಿಳಿಸಿದರು. ಇದಕ್ಕೆ ಉತ್ತರಿಸಿದ ಚೆಸ್ಕಾಂ ಅಧಿಕಾರಿಗಳು ಈಗ ಗುತ್ತಿಗೆ ನೀಡುವ ವ್ಯವಸ್ಥೆ ಬಂದಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಯೋಜನೆಗಳಿಗೆ ತ್ವರಿತವಾಗಿ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಪಶ್ಚಿಮಘಟ್ಟ ಅಭಿವೃದ್ಧಿ ಯೋಜನೆಯಡಿ ತಾಲ್ಲೂಕುವಾರು ಬಿಡುಗಡೆಯಾಗಿರುವ ಅನುದಾನದ ವಿವರ ಯಾವ ಯಾವ ಪ್ರದೇಶಗಳು ಈ ವ್ಯಾಪ್ತಿಗೆ ಸೇರ್ಪಡೆಗೊಳ್ಳುತ್ತದೆ ಎಂಬ ಬಗ್ಗೆ ನಿಖರ ಮಾಹಿತಿ ನೀಡಬೇಕೆಂದು ಜ್ಯೋತಿ ಗುರುದೇವ್ ಹೇಳಿದರು.
ಇದೇ ವೇಳೆ ಮಾತನಾಡಿದ ನಂಜುಂಡಸ್ವಾಮಿ ಅರಕಲಗೂಡು ತಾಲೂಕು ಕೂಡಾ ಮಲೆನಾಡು ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ ಸಾಕಷ್ಟು ಮಳೆಯೂ ಬೀಳುತ್ತ್ತಿದೆ ಹೀಗಾಗಿ ಅರಕಲಗೂಡು ತಾಲ್ಲೂಕನ್ನು ಪಶ್ಚಿಮಘಟ್ಟ ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಪ್ರಸ್ತಾವನೆ ಕಳಿಸುವಂತೆ ಅಧ್ಯಕ್ಷರನ್ನು ಕೋರಿದರು.
ಜಿಲ್ಲೆಯಲ್ಲಿ ಬಡವರ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಮರಳಿಗೂ ಕೊರತೆ ಎದುರಾಗುತ್ತಿದೆ. ಜನಸಾಮಾನ್ಯರ ಸ್ವಂತ ಬಳಕೆಗೆ ಗಾಡಿ, ಟ್ರ್ಯಾಕ್ಟರ್ನಲ್ಲಿ ಸಾಗಿಸುವ ಮರಳಿಗೆ ವಿನಾಯಿತಿ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ ಮತ್ತು ಉಪಾಧ್ಯಕ್ಷ ಬಿಳಿ ಚೌಡಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ.8ರಂದು ಹಾಸನದಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ನಿರ್ದೇಶನ ನೀಡಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.
ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಇಂಗ್ಲಿಷ್, ವೃತ್ತಿ ಆಧಾರಿತ ಕಲೆಗಳ ಶಿಕ್ಷಕರ ಕೊರತೆಯಿದೆ. ಇದನ್ನು ಸರಿಪಡಿಸಲು ಇಲಾಖೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸದಸ್ಯ ದೇವೇಗೌಡ(ಪಾಪಣ್ಣ) ಒತ್ತಾಯಿಸಿದರು.
ಜಿಪಂ ಮಾಜಿ ಅಧ್ಯಕ್ಷ ಸತ್ಯನಾರಾಯಣ ವಾಹನಗಳಿಗೆ ಎಫ್ಸಿ ನೀಡುವ ಸಂದರ್ಭದಲ್ಲಿ ವಾಹನಗಳು ಸಂಚಾರಕ್ಕೆ ಯೋಗ್ಯವಿದೆಯೇ ಎಂಬುದನ್ನು ಸೂಕ್ತವಾಗಿ ಪರಿಶೀಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು.