ತಹಸೀಲ್ದಾರ್, ಸಿಬ್ಬಂದಿಗೆ ನಿಂದನೆ: ಎಂಜಿನಿಯರ್ಗೆ ಶಿಕ್ಷೆ
ಹಾಸನ: ತಹಸೀಲ್ದಾರರು ಮತ್ತು ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ ವ್ಯಕ್ತಿಗೆ ಇಲ್ಲಿನ 1ನೇ ಅಧಿಕ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಲಯ 6 ತಿಂಗಳು ಶಿಕ್ಷೆ ವಿಧಿಸಿದೆ.
ಹೇಮಾವತಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ಲಕ್ಷ್ಮೀನಾರಾಯಣ ಶಿಕ್ಷೆಗೆ ಒಳಗಾದವರು. 2013ರ ಜ.22 ರಂದು ಗೊರೂರು ಹೇಮಾವತಿ ಜಲಾಶಯದ ಸರ್ಕ್ಯುಟ್ ಹೌಸ್ನಲ್ಲಿ ಅಂದಿನ ತಹಸೀಲ್ದಾರ್ ಜಗನ್ನಾಥ ಮತ್ತು ಅವರ ಸಿಬ್ಬಂದಿ ಜಮಾಬಂದಿ ಕೆಲಸ ನಿರ್ವಹಿಸುತ್ತಿದ್ದರು. ಆಗ ಕಾರ್ಯಪಾಲಕ ಎಂಜಿನಿಯರ್ ಲಕ್ಷ್ಮೀನಾರಾಯಣ ಅವರು ತಹಸೀಲ್ದಾರ್ ಹಾಗೂ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸರ್ಕ್ಯುಟ್ ಹೌಸ್ನಲ್ಲಿ ಅಕ್ರಮವಾಗಿ ಬಂಧಿಸಿ ಹಲ್ಲೆ ಕೂಡಾ ಮಾಡಿದ್ದರು. ಈ ಕುರಿತು ಗೊರೂರು ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಲಕ್ಷ್ಮೀನಾರಾಯಣ ಭಟ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎಂಜಿನಿಯರ್ ಲಕ್ಷ್ಮೀನಾರಾಯಣಗೆ 6 ತಿಂಗಳ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಮಂಜುನಾಥ್ ವಾದಿಸಿದ್ದರು.